ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಹೊಸನಗರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಭೇಟಿ ನೀಡಿದರು. ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಪ್ರಮುಖರಾದ ವಿದ್ಯಾಕುವಾರ್ ಕಾಂಚೋಡು, ಶ್ಯಾಮ ಭಟ್ ಅತ್ತಾಜೆ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಗೆ ಬಂದಾಗ ಬೇರೆಯೇ ಲೋಕಕ್ಕೆ ಬಂದ ಅನುಭವವಾಯಿತು. ಜನಾರ್ದನ ಸ್ವಾಮಿ ಮತ್ತು ಮಂಜುಳೇಶನ ಸನ್ನಿಧಿ ಶೈವ, ವೈಷ್ಣವರ ಸಮನ್ವಯ ಕ್ಷೇತ್ರವೆನಿಸಿದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ನೆನಪು ಕೂಡ ಬರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಮತ್ತು ಉಜಿರೆ ಜನಾರ್ದನ ಸ್ವಾಮಿಯಲ್ಲಿ ಮೈತ್ರಿಯಿದೆ. ಶೈವ, ವೈಷ್ಣವರಲ್ಲಿ ಜಗಳವಿಲ್ಲ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಶ್ರೀಗಳು, ದೇವಸ್ಥಾನ ಸುಂದರವಾಗಿ ಮೂಡಿಬಂದಿದೆ. ದೇವರಿಗೆ ನೂತನ ರಥ ಹಾಗು ಪುಷ್ಪರಥ ಸಮರ್ಪಣೆಯೂ ಔಚಿತ್ಯಪೂರ್ಣವಾದುದು ಎಂದರು.
ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರು ರಾಘವೇಶ್ವರ ಶ್ರೀಗಳನ್ನು ಬರಮಾಡಿಕೊಂಡರು. ಪೂರ್ಣಕುಂಭ, ಸಕಲ ವಾದ್ಯ ವೈಭವಗಳ ಮೂಲಕ ಸ್ವಾಗತಿಸಲಾಯಿತು.
ಹವ್ಯಕ ವಲಯ ಅಧ್ಯಕ್ಷ ವಿದ್ಯಾಕುಮಾರ್ ಕಾಂಚೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಶ್ಯಾಮ ಭಟ್ ಅತ್ತಾಜೆ, ಕೇಶವ ಭಟ್ ಅತ್ತಾಜೆ, ಅನಂತ ಭಟ್ ಎಂ., ಸಮಾಜ ಬಾಂಧವರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಪ್ರಧಾನ ಸಂಚಾಲಕ ಕೆ.ಮೋಹನ ಕುಮಾರ್, ಅರುಣಕುಮಾರ್, ಲಕ್ಷ್ಮಣ ಸಫಲ್ಯ ಇತರರು ಉಪಸ್ಥಿತರಿದ್ದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ, ಊರವರ ಶ್ರಮದಾನ ಸೇವೆ ಕಂಡು ಅತ್ಯಂತ ಸಂತೋಷವಾಗಿದೆ. ನಾನು ಮೊದಲ ಬಾರಿ ಬ್ರಹ್ಮಕಲಶೋತ್ಸವದ ಅನ್ನದಾನ ಕೇಂದ್ರಕ್ಕೆ ಬಂದು ಅನ್ನದಾನ ಸೇವೆ ಮಾಡುತ್ತಿದ್ದೇನೆ. ಎಲ್ಲ ಧರ್ಮದವರಿಗೂ ಸೂರ್ಯ ಒಬ್ಬನೇ. ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನಸಂತರ್ಪಣೆಯೇ ಅದಕ್ಕೆ ಸಾಕ್ಷಿ.