ಬಿ.ಸಿ.ರೋಡ್‌ನ ಸರ್ವೀಸ್ ರಸ್ತೆ ಬದಿಯಲ್ಲಿ ಅಪಾಯಕಾರಿ ಹೊಂಡ 
ಉಡುಪಿ

ಅಪಾಯಕ್ಕೆ ಬಾಯ್ದೆರೆದ ಹೊಂಡ

ಇಂದಿರಾ ಎನ್ ಕೆ
ಬಂಟ್ವಾಳ: ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ಪಕ್ಕ, ಕೃಷ್ಣಾನಂದ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಹೊಂಡವೊಂದನ್ನು ತೋಡಲಾಗಿದ್ದು ಮಳೆ ನೀರು ತುಂಬಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಎರಡು ವಾರದಿಂದ ಹೊಂಡ ಯಥಾಸ್ಥಿತಿಯಲ್ಲಿದ್ದು ಇಲ್ಲಿ ಯಾವುದೇ ಕಾಮಗಾರಿಗಳು ಕೂಡಾ ನಡೆಯುತ್ತಿಲ್ಲ. ಮಂಗಳವಾರ ಸಂಜೆ ಸುರಿದ ಮಳೆಗೆ ಗುಂಡಿಯಲ್ಲಿ ನೀರು ತುಂಬಿದ್ದು ಪಾದಚಾರಿಗಳು, ಮಕ್ಕಳು ನಡೆದಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಂಡಿತ.
ಬಿ.ಸಿ.ರೋಡ್‌ನ ಮುಖ್ಯವೃತ್ತದಿಂದ ನಗರಕ್ಕೆ ಬರುವ ಸರ್ವೀಸ್ ರಸ್ತೆ ಕಿರಿದಾಗಿದೆ. ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳಿಗೆ ಬರುವ ಗ್ರಾಹಕರು ವಾಹನಗಳನ್ನಿಡಲು ಇಲ್ಲಿ ಸ್ಥಳಾವಕಾಶವಿಲ್ಲ. ಇಂತಹ ಇಕ್ಕಟ್ಟಿನ ಸ್ಥಳದಲ್ಲಿ ಎರಡು ವಾರದ ಹಿಂದೆ ಅಗೆದ ಗುಂಡಿಯೊಂದು ಜನರಿಗೆ ಪ್ರಾಣ ಭೀತಿ ಹುಟ್ಟಿಸಿದೆ.
ಗ್ರಾಹಕರಿಗೂ ಕಿರಿಕಿರಿ: ಕೇಬಲ್ ಅಳವಡಿಸಲು ಗುಂಡಿ ತೋಡಲಾಗಿದೆ. ಆದರೆ ನಂತರ ಯಾವುದೇ ಕಾಮಗಾರಿಯೂ ನಡೆದಿಲ್ಲ, ಗುಂಡಿಯನ್ನೂ ಮುಚಿಲ್ಲ. ಅಗೆದು ಮಣ್ಣನ್ನು ರಸ್ತೆ ಪಕ್ಕವೇ ಹಾಕಲಾಗಿದೆ. ಮಳೆ ಬಂದಾಗ ಹೊಂಡದ ತುಂಬಾ ನೀರು ತುಂಬಿ ಸಣ್ಣಮಕ್ಕಳು ಇಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಬಿದ್ದರೆ ಪ್ರಾಣಕ್ಕೆ ಸಂಚಕಾರವಾಗಬಹುದು. ಅಂಗಡಿಗೆ ಬರುವ ಗ್ರಾಹಕರಿಗೆ ಈ ಹೊಂಡದಿಂದಾಗಿ ಸಮಸ್ಯೆ ಉಂಟಾಗಿದೆ. ವಾಹನಗಳನ್ನು ರಸ್ತೆ ಪಕ್ಕ ಪಾರ್ಕ್ ಮಾಡಲು ಸಾಧ್ಯವಾಗದೆ ರಸ್ತೆಯಲ್ಲಿಯೇ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹೊಂಡ ಯಾವ ಕಾಮಗಾರಿಗಾಗಿ ಅಗೆಯಲಾಗಿದೆ? ಆ ಕಾಮಗಾರಿ ಯಾವಾಗ ಮುಗಿಯುತ್ತದೆ? ಕಾಮಗಾರಿ ನಡೆಸುವವರು ಯಾರು? ಎಂಬ ಯಾವ ಮಾಹಿತಿಯೂ ಇಲ್ಲ. ಅಪಾಯಕಾರಿ ಹೊಂಡದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಮೌನವಾಗಿದ್ದಾರೆ. ವಾಹನಗಳು ರಸ್ತೆಯಲ್ಲಿ ನಿಂತಾಗ ಓಡೋಡಿ ಬರುವ ಟ್ರಾಫಿಕ್ ಪೊಲೀಸರು ಎರಡು ವಾರದಿಂದ ಇರುವ ಹೊಂಡದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಮೌನವಾಗಿರುವುದು ಯಾಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ಗುಂಡಿ ತೀರಾ ಅಪಾಯಕಾರಿಯಾಗಿದ್ದು ರಸ್ತೆ ಬದಿ ಹೋಗುವ ಪಾದಚಾರಿಗಳು ಬಿದ್ದರೆ ಪಾಣಕ್ಕೆ ಸಂಚಕಾರವಾಗುವುದು ಖಂಡಿತ. ತುಂಬಾ ದಿನದಿಂದ ಹೊಂಡ ಇದ್ದರೂ ಯಾವುದೇ ಕೆಲಸವೂ ಆಗುತ್ತಿಲ್ಲ. ಹೊಂಡ ಮುಚ್ಚುವ ಪ್ರಯತ್ನವೂ ನಡೆದಿಲ್ಲ. ಅಪಾಯ ಸಂಭವಿಸಿದ ಬಳಿಕವೇ ಹೊಂಡ ಮುಚ್ಚುವ ಲಕ್ಷಣ ಕಾಣುತ್ತಿದೆ.

— ಮನೋಹರ್, ಸ್ಥಳೀಯ ವ್ಯಾಪಾರಿ

ಗುಂಡಿ ಅಗೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ರಸ್ತೆ ಬದಿ ಹೊಂಡ ತೋಡಿ ಕಾಮಗಾರಿ ನಡೆಸದೆ ಬಿಟ್ಟಿರುವುದು ತಪ್ಪು. ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು.

— ತೀರ್ಥಪ್ರಸಾದ್, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ