ನದಿಯಲ್ಲಿ ತೇಲಿ ಬಂದ ಆಧಾರ್‌ಕಾರ್ಡ್‌ಗಳು
ಬಂಟ್ವಾಳ: ಫರಂಗಿಪೇಟೆ ಬಳಿ ನೇತ್ರಾವತಿ ನದಿಯಲ್ಲಿ ಪುದು ಗ್ರಾಮಕ್ಕೆ ಸಂಬಂಧಪಟ್ಟ ನೂರಾರು ಆಧಾರ್‌ಕಾರ್ಡ್‌ಗಳು ಬುಧವಾರ ಪತ್ತೆಯಾಗಿದೆ. ಸ್ಥಳೀಯರು ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಗಮನಕ್ಕೆ ತಂದಿದ್ದು, ಸ್ಥಳೀಯರೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಕಂತೆ ಕಂತೆಯಾಗಿ ನೂರಾರು ಆಧಾರ್‌ಕಾರ್ಡ್‌ಗಳು ನದಿಯಲ್ಲಿ ತೇಲುತ್ತಿದ್ದವು. ನದಿಗೆ ಯಾರು ತಂದು ಹಾಕಿದ್ದಾರೆ? ಯಾಕೆ ಹಾಕಿದ್ದಾರೆ? ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆಧಾರ್ ನೋಂದಣಿ ಮಾಡಿ 6 ತಿಂಗಳು, ವರ್ಷ ಕಳೆದರೂ ಕೆಲವರಿಗೆ ಕಾರ್ಡ್ ತಲುಪಿಲ್ಲ. ಈ ಕುರಿತು ಅಂಚೆ ಇಲಾಖೆ ವಿರುದ್ಧ ದೂರು ಕೇಳಿ ಬಂದಿತ್ತು. ಈಗ ಪುದು ಗ್ರಾಮದವರದ್ದೇ ಸಾವಿರಾರು ಆಧಾರ್ ಕಾರ್ಡ್ ಪತ್ತೆಯಾಗಿದೆ.
ತನಿಖೆಗೆ ಖಾದರ್ ಸೂಚನೆ
ನದಿಯಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಲು ಕಾರಣ ಏನು? ಅದಕ್ಕೆ ಕಾರಣರಾದವರು ಯಾರು ಎಂಬುದರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಆದೇಶಿಸಿದ್ದಾರೆ.