ಸಾಲಿಗ್ರಾಮ ಪಪಂ ಸುವರ್ಣ ಮಹೋತ್ಸವ ಸಂಭ್ರಮದ ಸಮಾರೋಪದಲ್ಲಿ ಸಾಧಕರನ್ನು ಗೌರವಿಸಲಾಯಿತು. 
ಉಡುಪಿ

ಸ್ವಚ್ಛ ಸಾಲಿಗ್ರಾಮಕ್ಕೆ ಹೊಸ ಭಾಷ್ಯ

ವಿಜಯವಾಣಿ ಸುದ್ದಿಜಾಲ ಕೋಟ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸುಂದರ ನಗರವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ. ಈ ದಿಸೆಯಲ್ಲಿ ಎಂಆರ್‌ಎಂ ಘಟಕ ಸ್ಥಾಪಿಸಿ ಸ್ವಚ್ಛ ಸಾಲಿಗ್ರಾಮಕ್ಕೆ ಹೊಸ ಭಾಷ್ಯ ಬರೆದಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶನಿವಾರ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಸಾಲಿಗ್ರಾಮ ಪಪಂ ಸುವರ್ಣ ಮಹೋತ್ಸವ ಸಂಭ್ರಮದ ಸಮಾರೋಪದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.
ಒಂದು ಗ್ರಾಮ ತ್ಯಾಜ್ಯ, ವ್ಯಸನ, ವ್ಯಾಜ್ಯ ಮುಕ್ತವಾಗಲು ಸ್ಥಳೀಯ ಗ್ರಾಮಸ್ಥರು, ಸ್ಥಳೀಯಾಡಳಿತ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸುಸ್ಥಿರ ಸಮಾಜ ಕಟ್ಟಲು ಸಾಧ್ಯ. ಈ ದಿಸೆಯಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಜತೆಗೆ ಸ್ವಚ್ಛತೆ ಬಗ್ಗೆ ಹೊಸ ಯೋಜನೆ ರೂಪಿಸುವಂತಾಗಬೇಕು. ಆಗ ಸುವರ್ಣ ಮಹೋತ್ಸವಕ್ಕೆ ಅರ್ಥ ಕಲ್ಪಿಸಲು ಸಾಧ್ಯ ಎಂದರು.

ತ್ಯಾಜ್ಯ ಘಟಕಕ್ಕೆ ಆಕ್ಷೇಪ ಸಲ್ಲ

ತ್ಯಾಜ್ಯ ಘಟಕಕ್ಕೆ ಸ್ಥಳೀಯರು ಆಕ್ಷೇಪಿಸಿದನ್ನು ಸಭೆಯಲ್ಲಿ ಸಂಸದರು ಪ್ರಸ್ತಾಪಿಸಿ, ಈ ಬಗ್ಗೆ ಗ್ರಾಮಸ್ಥರು ಸಹಕಾರ ನೀಡಬೇಕು. ನೀವು ವಿರೋಧಿಸಿದರೆ ಮನೆಗಳಲ್ಲಿರುವ ಕಸ ವಿಲೇವಾರಿ ಎಲ್ಲಿ ಮಾಡಲು ಸಾಧ್ಯ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದು ಸಭೆಯಲ್ಲಿ ಉಲ್ಲೇಖಿಸಿದರು.
ಪಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಏರ್ಪಡಿಸಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಪಂ ಅಧ್ಯಕ್ಷೆ ಸುಕನ್ಯಾ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಪಪಂ ಸುವರ್ಣ ಮಹೋತ್ಸವದ ಕಾರ್ಯಕ್ರಮದ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ, ಪ್ರಸ್ತುತ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ್, ಮೂಡುಗಿಳಿಯಾರು ಸರ್ವಕ್ಷೇಮ ಯೋಗಬನದ ನಿರ್ದೇಶಕ ಡಾ.ವಿವೇಕ ಉಡುಪ, ಪಪಂ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್, ಹಿಂದಿನ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಉದ್ಯಮಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಪ್ರಸ್ತುತ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಪಪಂ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸದಸ್ಯರು ಉಪಸ್ಥಿತರಿದ್ದರು. ಪಪಂ ಸದಸ್ಯೆ ಸುಲತಾ ಎಸ್.ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಸಹಾಯಕ ಮಂಜುನಾಥ್ ನಾಯರಿ ಸಹಕರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಕೃಷ್ಣಾರ್ಜುನ ಪ್ರಸಂಗ ಪ್ರದರ್ಶನಗೊಂಡಿತು.

ಸಾಧಕರಿಗೆ ಗೌರವಾರ್ಪಣೆ

ಪಪಂ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಸಾಧಕರು, ಪಪಂ ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರು, ಪಪಂ ವ್ಯಾಪ್ತಿಯ ವೈದ್ಯರು, ನಿವೃತ್ತ ಯೋಧರು, ಕ್ರೀಡಾ ಸಾಧಕರು, ಪಪಂ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸ್ವಚ್ಛತಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕೋಟ ಪಂಚವರ್ಣ ಸಂಘಟನೆ, ಜಿಲ್ಲೆಯ ಅತ್ಯುತ್ತಮ ಸ್ವಚ್ಛತಾ ತಂಡವಾಗಿ ಕೋಟದ ಪಂಚವರ್ಣ ಸಂಘಟನೆ, ಪಾಂಚಜನ್ಯ ಸಂಘ ಪಾರಂಪಳ್ಳಿ ಅವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.