ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಗಮಿಸಿದ ಸಂದರ್ಭ ಸ್ವಾಗತಿಸಿದ ಬಾಂಜಾರು ಕಾಲೋನಿ ನಿವಾಸಿಗಳು.  
ಉಡುಪಿ

ಬಾಂಜಾರು ಕಾಲನಿಗೆ ಸೌಲಭ್ಯ ಮರೀಚಿಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದ.ಕ. ಜಿಲ್ಲೆಯ ಹೆಬ್ಬಾಗಿಲು ಎಂದೇ ಕರೆಯುವ ಬಾಂಜಾರು ಮಲೆಕುಡಿಯ ಕಾಲೋನಿಗೆ ಅಭಿವೃದ್ಧಿ ಎಂಬುದು ದಶಕಗಳಿಂದಲೂ ಮರೀಚಿಕೆಯಾಗಿದ್ದು, ಚುನಾವಣೆ ಸಂದರ್ಭ ಮತಯಾಚನೆಗಷ್ಟೇ ಈ ಪ್ರದೇಶ ಸೀಮಿತವಾಗಿದೆ.
ಬೆಳ್ತಂಗಡಿ ತಾಲೂಕು ಕೇಂದ್ರದಿಂದ 45 ಕಿ.ಮೀ. ದೂರದಲ್ಲಿ ದ.ಕ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ದಟ್ಟ ಅರಣ್ಯದ ನಡುವೆ ಬಾಂಜಾರು ಮಲೆಕುಡಿಯ ಕಾಲನಿ ಇದೆ. ಈ ಊರಿನಲ್ಲಿ ಜಿಲ್ಲಾಧಿಕಾರಿಗಳ ಗೌರವಾರ್ಥ 1982ರಲ್ಲಿಕ ಡಿಸಿ ಕಟ್ಟೆ ನಿರ್ಮಿಸಿದ್ದು, 2016ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅದನ್ನು ಉದ್ಘಾಟಿಸಿದ್ದರು. ಬಳಿಕ 4.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗಳಾದವು. ಜತೆಗೆ ಚುನಾವಣೆ ಬೂತ್ ಸ್ಥಾಪನೆಗೊಂಡಿತು. ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿದ್ದಾಗ 48 ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ದೊರೆಯುವುದರ ಜತೆಗೆ ರಸ್ತೆ ನಿರ್ವಾಣಕ್ಕೆ ಕಂದಾಯ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಿತು. ಆದರೆ ನಂತರ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ.

ಸಾಕಾರಗೊಳ್ಳದ ರಸ್ತೆ ನಿರ್ಮಾಣ ಯೋಜನೆ

ಬಾಂಜಾರು ಮಲೆಕುಡಿಯ ಕಾಲನಿಗೆ ಚಾರ್ವಾಡಿ ಘಾಟಿಯ ಒಂಬತ್ತು ತಿರುವುನಿಂದ 9 ಕಿ.ಮೀ. ದೂರ ಅರಣ್ಯ ಮತ್ತು ಖಾಸಗಿ ಜಮೀನಿನ ಮೂಲಕ ತೆರಳಬೇಕು. ಈ ರಸ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಹಾಗೂ ಖಾಸಗಿ ಜಾಗದ ಮಾಲೀಕರ ವಿರೋಧವಿದೆ. ಇದಕ್ಕೆ ಪರ್ಯಾಯವಾಗಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ನೆರಿಯ ಗ್ರಾಮದ ಅಣಿಯೂರು- ಕಾಟಾಜೆ- ಪರ್ಪಲ ಮೂಲಕ ಬಾಂಜಾರು ಮಲೆಕುಡಿಯ ಕಾಲನಿ ರಸ್ತೆ ಸಂಪರ್ಕಕ್ಕೆ ಸರ್ವೆ ಕಾರ್ಯ ನಡೆಸಿದ್ದರು. ಬಳಿಕ ಅಭಿವೃದ್ಧಿ ಕಾಮಗಾರಿ ಅಲ್ಲಿಗೇ ಸ್ಥಗಿತಗೊಂಡಿದೆ.

ಅಂಗನವಾಡಿಗೆ ಬೇಕು ಪ್ರತ್ಯೇಕ ಕಟ್ಟಡ

ಕಾಲನಿಯಲ್ಲಿರುವ ಸಮುದಾಯ ಭವನದಲ್ಲಿ ಐವತ್ತು ಜನರಿಗೆಷ್ಟೇ ಕುಳಿತುಕೊಳ್ಳಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಭವನವನ್ನು ವಿಸ್ತರಿಸಿದರೆ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗಲಿದೆ. ಇದೇ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಮರ ಏರಿದರಷ್ಟೇ ನೆಟ್‌ವರ್ಕ್

ಬಾಂಜಾರು ಪ್ರದೇಶದಲ್ಲಿ 200ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಂಜಾರು ಪ್ರದೇಶವೊಂದರಲ್ಲೇ ಇದ್ದಾರೆ. ನೆಟ್‌ವರ್ಕ್ ಸಮಸ್ಯೆಯಿಂದ ಆನ್‌ಲೈನ್ ತರಗತಿಗಳಿಗಾಗಿ ವಿದ್ಯಾರ್ಥಿಗಳು 18 ಕಿ.ಮೀ. ದೂರದ ಚಾರ್ಮಾಡಿಗೆ ಬರಬೇಕಿದೆ. ಜತೆಗೆ ಪಡಿತರ ಪಡೆಯಲು ನೆಟ್‌ವರ್ಕ್ ಅವಶ್ಯಕತೆಯಿದ್ದು, ಈ ಕಾರಣದಿಂದ ಗ್ರಾಮಸ್ಥರು ಮೊಬೈಲ್ ಹಿಡಿದುಕೊಂಡು ಮರ ಅಥವ ಬಂಡೆಕಲ್ಲು ಏರುವ ಅನಿವಾರ್ಯತೆ ಇದೆ.

ನಮ್ಮ ಬಾಂಜಾರು ಕಾಲನಿಯಲ್ಲಿ ಶೇ.100 ಮತದಾನವಾದರೂ ಶೇ.10ರಷ್ಟೂ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗಲಷ್ಟೇ ನಮ್ಮ ಕಾಲನಿ ನೆನಪಾಗುತ್ತದೆ. ನಾವು ಸಂವಿಧಾನಬದ್ಧವಾಗಿ ಸಿಗಬೇಕಿರುವ ಹಕ್ಕುಗಳನ್ನು ಕೇಳುತ್ತೇವೆ ಅಷ್ಟೆ.