ಬಂಟ್ವಾಳದಲ್ಲಿ ಸಂಚರಿಸುವ ರಿಕ್ಷಾವೊಂದರಲ್ಲಿ. ಮಿನಿ ಗ್ರಂಥಾಲಯ
ಒಂದೆಡೆ ಮಕ್ಕಳ ಚಿತ್ರಕತೆ ಪುಸ್ತಗಳು, ಕಾದಂಬರಿಗಳು, ಚಿತ್ರಗೀತೆ, ಕ್ಷೇತ್ರ ಪರಿಚಯ, ಸಾಮಾನ್ಯಜ್ಞಾನ ಪುಸ್ತಕಗಳ ಸಂಗ್ರಹ. ಇನ್ನೊಂದೆಡೆ ಶ್ರೇಷ್ಠ ದಾರ್ಶನಿಕರು, ಚಿಂತಕರು, ಸಾಹಿತಿಗಳ ಸ್ಫೂರ್ತಿಯ ವಾಕ್ಯಗಳ ಫಲಕಗಳು. ಇಂಥದ್ದೊಂದು ಚಿತ್ರಣ ಕಾಣಸಿಗುವುದು ಯಾವುದೋ ಗ್ರಂಥಾಲಯದಲ್ಲಿಯೋ ಶಾಲೆಗಳಲ್ಲೋ ಅಲ್ಲ. ಬದಲಾಗಿ ಬಂಟ್ವಾಳದಲ್ಲಿ ಸಂಚರಿಸುವ ರಿಕ್ಷಾವೊಂದರಲ್ಲಿ. ಮಿನಿ ಗ್ರಂಥಾಲಯದಂತಿರುವ ಈ ರಿಕ್ಷಾ ಪ್ರಯಾಣಿಕರಿಗೆ ಹೊಸ ಅನುಭವ ನೀಡುವ ಜತೆಗೆ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲೂ ಸಹಕಾರಿಯಾಗಿದೆ.
ಇಂಥದ್ದೊಂದು ವಿನೂತನ ಪರಿಕಲ್ಪನೆಯನ್ನು ರಿಕ್ಷಾದಲ್ಲಿ ರೂಪಿಸಿದ್ದು ನೀರಪಾದೆ ನಿವಾಸಿ, ರಿಕ್ಷಾ ಚಾಲಕ ಸುಶಾನ್ ಬಿ.ಸಿ.ರೋಡ್. ವೃತ್ತಿಯಲ್ಲಿ ಗೋಡೆ ಚಿತ್ರಕಲಾವಿದರಾಗಿರುವ ಅವರು ರಿಕ್ಷಾ ಚಾಲನೆ ಹಾಗೂ ಕ್ಯಾಟರಿಂಗ್ ಅನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಬಿ.ಸಿ.ರೋಡಿನ ಅಜ್ಜಿಬೆಟ್ಟಿನಲ್ಲಿ ವಾಸವಿರುವ ಸುಶಾನ್ ಪುಸ್ತಕ ಪ್ರೇಮಿಯಾಗಿದ್ದು, ಜನರಲ್ಲಿ ಓದುವ ಹವ್ಯಾಸ ವೃದ್ಧಿಸಬೇಕೆಂಬ ನಿಟ್ಟಿನಲ್ಲಿ ತಮ್ಮ ರಿಕ್ಷಾದೊಳಗೆ ಮಿನಿ ಗ್ರಂಥಾಲಯ ಆರಂಭಿಸಿದ್ದಾರೆ.
ಮಕ್ಕಳಿಗೆ, ಹಿರಿಯರಿಗೆ ಬೇಕಾಗುವ ಪುಸ್ತಕಗಳು ಈ ರಿಕ್ಷಾದಲ್ಲಿವೆ. ಪ್ರಯಾಣಿಕರು ಈ ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದಲೂ ಅವಕಾಶ ಕಲ್ಪಿಸಿದ್ದಾರೆ. ಪುಸ್ತಕ ಕೊಂಡೊಯ್ದವರು ಓದಿದ ಬಳಿಕ ಬಿ.ಸಿ.ರೋಡಿನಲ್ಲಿರುವ ರಿಕ್ಷಾ ಪಾರ್ಕಿಂಗ್‌ನಲ್ಲಿ ಹಿಂದುರಿಗಿಸಬಹುದು.
ಈ ಒಂದು ವಿಶೇಷ ಪರಿಕಲ್ಪನೆಯಿಂದ ಪ್ರಯಾಣಿಕರೊಂದಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಲು ಸಾಧ್ಯವಿದೆ. ಈಗಾಗಲೇ ಅನೇಕ ಮಂದಿ ಪುಸ್ತಕಗಳನ್ನು ಕೊಂಡೊಯ್ದು ಓದಿ ಹಿಂದಿರುಗಿಸಿದ್ದಾರೆ. ಏಳೆಂಟು ಪುಸ್ತಕಗಳನ್ನು ಆಸಕ್ತ ಪ್ರಯಾಣಿಕರು ತೆಗೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನ ಬಿಡುವಿನ ವೇಳೆ ಪಾರ್ಕಿಂಗ್‌ನಲ್ಲಿ ರಿಕ್ಷಾ ಚಾಲಕರು, ಸಾರ್ವಜನಿಕರು ಕೂಡ ಬಂದು ಪುಸ್ತಕಗಳನ್ನು ಓದುತ್ತಾರೆ ಎಂದು ಸುಶಾನ್ ಸಂತಸ ಹಂಚಿಕೊಂಡಿದ್ದಾರೆ.
ಆಕರ್ಷಣೀಯ ಬರಹಗಳು
ರಿಕ್ಷಾದ ಎರಡು ಮಗ್ಗಲುಗಳಲ್ಲಿ ಕುಂಡಗಳಲ್ಲಿ ಗಿಡಗಳನ್ನು ನೆಟ್ಟಿರುವುದು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ರಿಕ್ಷಾದೊಳಗೆ ಜೋಡಿಸಿರುವ ಶ್ರೇಷ್ಠ ಚಿಂತಕರು, ತತ್ವಜ್ಞಾನಿಗಳ ಸ್ಫೂರ್ತಿಯ ಸಾಲುಗಳನ್ನು ಪ್ರಯಾಣಿಕರು ಆಸಕ್ತಿಯಿಂದ ಓದುತ್ತಾರೆ. ರಿಕ್ಷಾದ ಎರಡೂ ಬದಿಗಳಲ್ಲಿ ದೇಶ ಕಾಯುವ ಯೋಧರು ನಿಜವಾದ ಹೀರೋಗಳು ಎಂಬ ಬರಹ ಗಮನ ಸಳೆಯುತ್ತದೆ. ಜತೆಗೆ ಅಗ್ನಿಶಾಮಕ ದಳದಂತಹ ತುರ್ತು ಸೇವೆಯ ಸಹಾಯವಾಣಿಯ ಸಂಖ್ಯೆಗಳೂ ಇವೆ.
ಇನ್ನಷ್ಟು ಹೊಸ ಸೇರ್ಪಡೆಯ ಯೋಜನೆ
ಪ್ರಯಾಣಿಕರಿಗೆ ರಿಕ್ಷಾದೊಳಗೆ ಇನ್ನಷ್ಟು ಹೊಸ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ಸುಶಾನ್ ಅವರಲ್ಲಿದೆ. ಚಾಕ್ಲೆಟ್ ಮತ್ತಿತರ ತಿಂಡಿಗಳ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಿಕ್ಷಾದಲ್ಲಿಯೇ ಸಣ್ಣ ಡಸ್ಟ್‌ಬಿನ್, ಕುಡಿಯುವ ನೀರಿಗಾಗಿ ಬಿಸಿನೀರಿನ ಥರ್ವಾಸ್, ಲಸ್ಸಿ, ಮಜ್ಜಿಗೆ ಮೊದಲಾದ ತಂಪು ಪಾನೀಯ ವ್ಯವಸ್ಥೆ, ಬೆಳಗ್ಗಿನ ವೇಳೆ ದಿನ ಪತ್ರಿಕೆ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ನನಗೆ ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಇದೆ. ಜಾತ್ರೆ, ವಸ್ತುಪ್ರದರ್ಶನ, ವಾರಾಟ ಮೇಳಗಳಿಗೆ ಹೋದಾಗ ಪುಸ್ತಕಗಳನ್ನೇ ಖರೀದಿಸುತ್ತೇನೆ. ಪುಸ್ತಕಗಳು ಮನೆಯಲ್ಲಿಯೇ ಉಳಿದರೆ ಏನು ಪ್ರಯೋಜನವಿಲ್ಲ, ಅದರ ಬದಲು ಸಾವಿರಾರು ಮಂದಿ ಪ್ರಯಾಣಿಸುವ ರಿಕ್ಷಾದಲ್ಲಿದ್ದರೆ ಆಸಕ್ತ ಓದುಗರಿಗೆ ಪ್ರಯೋಜನವಾಗಲೆಂದು ರಿಕ್ಷಾದಲ್ಲಿ ಗ್ರಂಥಾಲಯ ತೆರೆದಿದ್ದೇನೆ.
— ಸುಶಾನ್ ಬಿ.ಸಿ.ರೋಡು, ರಿಕ್ಷಾ ಚಾಲಕ