ಉಡುಪಿಯ ಬಸ್​ ನಿಲ್ದಾಣದಲ್ಲಿ ರಾದ್ಧಾಂತ ಮಾಡಿದ ಯುವತಿಗೆ ಆಕೆಯ ತಾಯಿ ಹಾಗೂ ವಿಶು ಶೆಟ್ಟಿ ಬುದ್ಧಿಮಾತು ಹೇಳಿದರು. 
ಉಡುಪಿ

ಮನೋನಿಗ್ರಹ ಕಳೆದುಕೊಂಡ ಯುವತಿ ರಂಪಾಟ

* ಉಡುಪಿ ಬಸ್​ ನಿಲ್ದಾಣದಲ್ಲಿ ಚಾಕು ಬೀಸಿ ರಾದ್ಧಾಂತ

* ಕೂದಲೆಳೆಯಲ್ಲಿ ಪಾರಾದ ಸಮಾಜ ಸೇವಕ ವಿಶು ಶೆಟ್ಟಿ

ಉಡುಪಿ: ಕಾರಣಾಂತರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಪ್ರಾಪ್ತ ಯುವತಿಯೋರ್ವಳು ತನ್ನ ರಕ್ಷಣೆಗೇ ಬಂದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮೇಲೆಯೇ ಚಾಕುವಿನೊಂದಿಗೆ ದಾಳಿ ನಡೆಸಿದ ಘಟನೆ ಉಡುಪಿ ಬನ್ನಂಜೆಯ ಸರ್ಕಾರಿ ಬಸ್​ ನಿಲ್ದಾಣದಲ್ಲಿ ಸೋಮವಾರ (ಜೂ.15) ನಡೆದಿದೆ.
ಯುವತಿ ವಿಶು ಶೆಟ್ಟಿ ಅವರ ಮೇಲೆ ಚಾಕು ಬೀಸಿದ್ದು, ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ. ಯುವತಿಯ ರಾದ್ಧಾಂತ ಕಂಡು ಬೆಚ್ಚಿದ ಆಕೆಯ ತಾಯಿ ಮೂರ್ಛೆ ಬಿದ್ದಿದ್ದು, ತಂದೆಯ ಅಪೇಕ್ಷೆಯಂತೆ ಯುವತಿ ಹಾಗೂ ಆಕೆಯ ತಾಯಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ

ಉತ್ತರ ಕನ್ನಡ ಜಿಲ್ಲೆ ಮೂಲದ 17 ವರ್ಷದ ಯುವತಿ ಹೆತ್ತವರ ಕಣ್ತಪ್ಪಿಸಿ ಸೋಮವಾರ ಬೆಳಗ್ಗೆ ಉಡುಪಿಗೆ ಬರುವ ಸರ್ಕಾರಿ ಬಸ್​ ಏರಿದ್ದಳು. ಇದನ್ನು ತಿಳಿದು ಹೆತ್ತವರೂ ಸಹ ಕಾರಿನ ಮೂಲಕ ಯುವತಿಯಿದ್ದ ಬಸ್​ ಹಿಂಬಾಲಿಸಿಕೊಂಡು ಉಡುಪಿಗೆ ಬಂದಿದ್ದರು.
ಯುವತಿಯಿಂದ ವಶಕ್ಕೆ ಪಡೆದ ಚಾಕು.
ಈ ವಿಚಾರ ತಿಳಿದು ಸಹಾಯ ಮಾಡಲೆಂದು ಸಮಾಜ ಸೇವಕ ವಿಶು ಶೆಟ್ಟಿ ಬಸ್​ ನಿಲ್ದಾಣಕ್ಕೆ ಧಾವಿಸಿ, ಯುವತಿಯನ್ನು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸಹಾಯದಿಂದ ವಶಕ್ಕೆ ಪಡೆಯಲು ಪ್ರಯತ್ನಿಸಿದರು. ತನ್ನನ್ನು ಹಿಡಿಯುತ್ತಾರೆಂಬ ಕಾರಣಕ್ಕೆ ಯುವತಿ ತನ್ನ ಬ್ಯಾಗ್​ನಿಂದ ಚಾಕು ತೆಗೆದು ವಿಶು ಶೆಟ್ಟಿ ಮೇಲೆ ಮುಗಿಬಿದ್ದಳು. ದಾಳಿ ನಡೆಸಿ ಚಾಕು ಬೀಸಿದ್ದು, ಅದೃಷ್ಟವಶಾತ್​ ಯಾವುದೇ ಅಪಾಯವಾಗಿಲ್ಲ. ಆದರೂ ಜೀವದ ಹಂಗು ತೊರೆದು ಯುವತಿಯ ಕೈಯಲ್ಲಿದ್ದ ಚಾಕು ಕಸಿದುಕೊಳ್ಳುವಲ್ಲಿ ಸಫಲರಾದರು.
ಯುವತಿಯ ಆರ್ಭಟ ಕಂಡು ಬಸ್​ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಯುವತಿ ಮುಷ್ಟಿ ಹಿಡಿದು ಇಬ್ಬರು ಪ್ರಯಾಣಿಕರ ಮೇಲೆಯೂ ಹಲ್ಲೆ ಮಾಡಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದಳು. ರಕ್ಷಣಾ ಕಾರ್ಯಾಚರಣೆಯಲ್ಲಿ ಮಹಿಳಾ ಠಾಣೆಯ ಸಿಬ್ಬಂದಿ ರಶ್ಮಿ, ಮಕ್ಕಳ ರಕ್ಷಣಾ  ಇಲಾಖೆಯ ಸುನಂದಾ ಹಾಗೂ ನಾಗರತ್ನಾ ನೆರವಾದರು. 
ಯುವತಿಯ ಈ ಮನೋವೈಕಲ್ಯತೆಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಯುವತಿಗೆ ಇನ್​ಸ್ಟ್ರಾಗ್ರಾಮ್​ ಮೂಲಕ ಹೊರ ರಾಜ್ಯದ ಯುವಕನ ಪರಿಚಯವಾಗಿದ್ದು, ಆತನೊಂದಿಗೆ ನಿರಂತರ ಮೊಬೈಲ್​ ಸಂಪರ್ಕದಲ್ಲಿದ್ದಳು ಎಂದು ಯುವತಿಯ ತಂದೆ ತಿಳಿಸಿದ್ದಾರೆ.
"

ಮೊಬೈಲ್​ ಗೀಳಿನಿಂದಾಗಿ ಯುವಕ-ಯುವತಿಯರು ದಾರಿ ತಪ್ಪುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಮೊಬೈಲ್​ ಇರುವುದು ಸಾಮಾನ್ಯ ಎಂಬಂತಾಗಿದೆ. ಅವರಿಗೆ ಮೊಬೈಲ್​ ಕೊಡುವುದು ತಪ್ಪಲ್ಲ. ಆದರೆ, ಮೊಬೈಲ್​ ಯಾವ ರೀತಿ ಬಳಸುತ್ತಾರೆ ಎಂಬ ಕುರಿತು ಪಾಲಕರು ಎಚ್ಚರಿಕೆ ವಹಿಸಬೇಕು. ಕೈ ಮೀರಿದಾಗ ಅಳುವುದಲ್ಲ. ತಮ್ಮ ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ನಿಜಾರ್ಥದಲ್ಲಿ ಪಾಲಕರಾಗಬೇಕು.

— ವಿಶು ಶೆಟ್ಟಿ. ಸಮಾಜ ಸೇವಕ.