ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ಅಪಾಯಕಾರಿಯಾಗಿ ಹಳಿ ಅಡ್ಡದಾಟುತ್ತಿರುವ ಪ್ರಯಾಣಿಕರು.
ಪುರುಷೋತ್ತಮ ಪೆರ್ಲ ಕಾಸರಗೋಡು
ಮಂಜೇಶ್ವರ ರೈಲ್ವೆ ನಿಲ್ದಾಣದಲ್ಲಿ ಕಳೆದ ಒಂದು ದಶಕದಲ್ಲಿ ಹಲವಾರು ಜೀವಗಳು ರೈಲಿಗೆ ಬಲಿಯಾಗಿವೆ. ರೈಲ್ವೆ ಇಲಾಖೆಯ ಸಡಿಲ ಧೋರಣೆಯ ಜತೆಗೆ ಅಡ್ಡಹಾದಿ ಹಿಡಿಯುವ ಪ್ರಯಾಣಿಕರ ನಿರ್ಲಕ್ಷೃದ ಸಂಚಾರದಿಂದಲೂ ಜೀವಹಾನಿಯಾಗುತ್ತಿದೆ.
ಬಹುತೇಕ ಸಂದರ್ಭಗಳಲ್ಲಿ ಪ್ರಯಾಣಿಕರು ಒಂದು ಫ್ಲ್ಯಾಟ್‌ಫಾರ್ಮ್‌ನಿಂದ ಇನ್ನೊಂದು ಕಡೆಗೆ ಸಾಗಲು ಸುಲಭ ಮಾರ್ಗವಾಗಿ ಹಳಿಗಳನ್ನು ದಾಟುವ ಅಡ್ಡ ಮಾರ್ಗ ಹಿಡಿಯುತ್ತಿದ್ದು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಪ್ರಯಾಣಿಕರು ರೈಲು ಹತ್ತಲು ಹಾಗೂ ರೈಲಿನಿಂದ ಇಳಿದು ಸಾಗಲು ನಿಲ್ದಾಣದಲ್ಲಿ ಮೆಟ್ಟಿಲುಗಳ ಸೌಲಭ್ಯ ಇದ್ದರೂ ಅದಳನ್ನು ಬಳಸದೆ ಹಳಿ ದಾಟುವ ಅಡ್ಡದಾರಿ ಹಿಡಿಯುತ್ತಾರೆ. ಇಂಥ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ರೈಲು ಹೊರಡುವ ಸಮಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಇನ್ನೊಂದು ಫ್ಲ್ಯಾಟ್‌ಫಾರ್ಮ್‌ಗೆ ಮೆಟ್ಟಿಲು ಹತ್ತಿ ಹೋಗುವಷ್ಟು ವ್ಯವಧಾನ ಇರುವುದಿಲ್ಲ. ಅವಸರದಲ್ಲಿ ಹಳಿಗಳನ್ನೇ ದಾಟಿಕೊಂಡು ಹೋಗುವ ಸಾಹಸ ಮಾಡುತ್ತಾರೆ. ಧಾವಂತದಲ್ಲಿ ಹಳಿ ದಾಟುವ ವೇಳೆ ರೈಲು ಬರುತ್ತಿರುವುದು ಅರಿವಿಗೆ ಬಾರದೆ ತಾವೇ ಜೀವಹಾನಿ ಮಾಡಿಕೊಳ್ಳುತ್ತಾರೆ. ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ವರ್ಷಗಳ ಹಿಂದೆ ಇದೇ ರೀತಿ ಹಳಿ ಅಡ್ಡದಾಟುವಾಗ ರೈಲು ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು.
ರೈಲಿನಡಿಯೂ ಸಾಗುವ ಸಾಹಸ: ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವ ಪ್ರಯಾಣಿಕರಿಗೆ ಒಳ ಪ್ರದೇಶ ಮಂಜೇಶ್ವರಕ್ಕೆ ಹೋಗಲು ರೈಲೆ ್ವಹಳಿ ಸಮೀಪ ಗೇಟ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಹಳೇ ಮಂಜೇಶ್ವರವೆಂದೇ ಕರೆಯಲ್ಪಡುವ ಅತಿ ಜನದಟ್ಟಣೆಯ ಒಳ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಸಾಗಲು ರೈಲು ಹಳಿಯನ್ನು ದಾಟಿಯೇ ಹೋಗಬೇಕು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಕಚೇರಿ ಸಹಿತ ಹಲವು ಬ್ಲಾಕ್‌ಮಟ್ಟದ ಕಾರ್ಯಾಲಯಗಳು, ಶಾಲೆ, ಗೋವಿಂದ ಪೈ ಸ್ಮಾರಕ ಗ್ರಂಥಾಲಯ ಮುಂತಾದ ಕಡೆಗಳಿಗೆ ಸುಲಭವಾಗಿ ತಲುಪಲು ರೈಲು ಹಳಿಯ ಕಾಲ್ನಡಿಗೆ ಹಾದಿಯನ್ನೇ ಜನರು ಹೆಚ್ಚಾಗಿ ಬಳಸುತ್ತಾರೆ. ರೈಲು ಹಳಿಯಲ್ಲಿ ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಸರಕು ಸಾಗಾಟದ ರೈಲುಗಳು ಠಿಕಾಣಿ ಹೂಡುತ್ತವೆ. ಇಂತ ಸಂದರ್ಭದಲ್ಲಿ ಜನರು ರೈಲಿನಡಿಯಿಂದಲೇ ಅಪಾಯಕಾರಿಯಾಗಿ ತೆವಳಿಕೊಂಡು ಹೋಗುತ್ತಾರೆ.
ಮಂಜೇಶ್ವರದಲ್ಲಿ ಮರುಕಳಿಸುತ್ತಿರುವ ದುರಂತ
ಮಂಜೇಶ್ವರ ರೈಲ್ವೆ ನಿಲ್ದಾಣ ವಠಾರದಲ್ಲಿ ರೈಲು ಡಿಕ್ಕಿಯಾಗಿ ಸಾವು ಸಂಭವಿಸುತ್ತಿರುವ ಘಟನೆ ಮರುಕಳಿಸುತ್ತಿರುವುದು ಆತಂಕಕಾರಿಯಾಗಿದೆ. 2018ರಲ್ಲಿ ಇದೇ ಪ್ರದೇಶದಲ್ಲಿ ಒಂದು ಮಗು ಸೇರಿದಂತೆ ಮೂವರು ರೈಲು ಡಿಕ್ಕಿಯಾಗಿ ಸಾವಿಗೀಡಾಗಿದ್ದರು. ಅನತಿ ದೂರದಲ್ಲಿ ಕಾಲ್ನಡೆ ಮೇಲ್ಸೇತುವೆಯಿದ್ದರೂ, ಹಳಿ ದಾಟಿ ಹೋಗಿದ್ದು ದುರಂತಕ್ಕೆ ಕಾರಣವಾಗಿತ್ತು.
ಅಪಾಯವಾದರೆ ಇಲಾಖೆ ಹೊಣೆಯಲ್ಲ
ರೈಲ್ವೆ ಇಲಾಖೆ ಪ್ರಕಾರ ಹಳಿಯನ್ನು ದಾಟಿ ಹೋಗುವುದು ಅನಧಿಕೃತ. ನಿಲ್ದಾಣದಲ್ಲಿ ಇಲಾಖೆಯಿಂದ ನಿರ್ಮಿಸಿರುವ ಕಾಲ್ನಡಿಗೆ ಮೇಲ್ಸೇತುವೆ ಇದ್ದರೂ ಹಳಿಗಳನ್ನು ದಾಟಿ ಸಾಗುವ ವೇಳೆ ಜನರಿಗೆ ಯಾವುದೇ ಅಪಾಯ ಉಂಟಾದಲ್ಲಿ ರೈಲ್ವೆ ಇಲಾಖೆ ಇದಕ್ಕೆ ಹೊಣೆಯಾಗುವುದಿಲ್ಲ. ಪ್ರಯಾಣಿಕರು ಸ್ವಂತ ಜವಾಬ್ದಾರಿಯಿಂದ ಹಳಿ ದಾಟಿ ಹೋಗಬಹುದು ಎನ್ನುತ್ತಾರೆ ಅಧಿಕಾರಿಗಳು.
ರೈಲ್ವೆ ನಿಲ್ದಾಣಗಳಲ್ಲಿ ಕಾನೂನು ಉಲ್ಲಂಘಿಸಿ ಹಳಿ ದಾಟುವವರ ಬಗ್ಗೆ ಕಟ್ಟುನಿಟ್ಟಿನ ನಿಯಂತ್ರಣ ತರಬೇಕು. ನಿಲ್ದಾಣಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕಾನೂನು ಉಲ್ಲಂಘಿಸಿ ಹಳಿ ಅಡ್ಡ ದಾಟುವವರಿಂದ ಗರಿಷ್ಠ ಪ್ರಮಾಣದಲ್ಲಿ ದಂಡ ವಸೂಲಿ ಸೇರಿದಂತೆ ಇತರ ಶಿಕ್ಷೆಗೆ ಗುರಿಪಡಿಸಿದಾಗ ಕ್ರಮೇಣ ಈ ರೀತಿ ಹಳಿ ದಾಟುವವರ ಸಂಖ್ಯೆ ಕಡಿಮೆಯಾಗಲು ಸಾಧ್ಯ. ಇಂತಹ ದುಸ್ಸಾಹಸ ಕೈಗೊಳ್ಳುವ ಪ್ರಯಾಣಿಕರೂ ಜಾಗೃತರಾಗಬೇಕಾಗಿದೆ.
— ಆರ್.ಪ್ರಶಾಂತ್ ಅಧ್ಯಕ್ಷ, ಕಾಸರಗೋಡು ರೈಲ್ವೆ ಪ್ರಯಾಣಿಕರ ಸಂಘ