ರಾಷ್ಟ್ರಮಟ್ಟದ ಜಾವೆಲಿನ್ ಆಟಗಾರ ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. 
ಉಡುಪಿ

ಕ್ರೀಡೆಯಲ್ಲಿ ತೊಡಗಿಕೊಂಡಾಗ ಲವಲವಿಕೆ ಜೀವನ

ಶಿರ್ವ: ಕ್ರೀಡಾ ಚಟುವಟಿಕೆಗಳಲ್ಲಿ ಯಶಸ್ಸನ್ನು ಗಳಿಸಬೇಕಾದರೆ ತರಬೇತಿ ಪಡೆಯುವುದರ ಜತೆಗೆ ಅಗತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ಕ್ರೀಡೆಯಿಂದ ಉತ್ತಮ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ನಿರಂತರ ತೊಡಗಿಸಿಕೊಳ್ಳುವುದರ ಮೂಲಕ ಲವಲವಿಕೆಯ ಜೀವನ ನಡೆಸಲು ಸಾಧ್ಯ ಎಂದು ರಾಷ್ಟ್ರಮಟ್ಟದ ಜಾವೆಲಿನ್ ಆಟಗಾರ ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ ಹೇಳಿದರು.
ಜ್ಞಾನಚೇತನಾ ಎಜುಕೇಶನ್ ಟ್ರಸ್ಟ್‌ನ ಸಹಯೋಗದೊಂದಿಗೆ ಶುಕ್ರವಾರ ಶಿರ್ವ ಹಿಂದು ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ ಕಾಲೇಜಿನ 79ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟಗಳು ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಸಮಚಿತ್ತದಿಂದ ಯಶಸ್ಸಿನತ್ತ ಮುನ್ನಡೆಯಬೇಕು ಎಂದರು.
ಜ್ಞಾನಚೇತನಾ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ, ಕಾಲೇಜಿನ ಅಕಾಡೆಮಿಕ್ ಡೀನ್ ಗುರುಪ್ರಸಾದ್ ಭಟ್, ಕ್ಯಾಂಪಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮಿಥುನ್ ಚಕ್ರವರ್ತಿ, ನೀಶಾ ಶೆಟ್ಟಿ, ಪ್ರೌಢಶಾಲಾ ವಿಭಾಗದ ನಿವೃತ್ತ ಮುಖ್ಯಶಿಕ್ಷಕಿ ಶಕಿಲಾ ಹೆಗ್ಡೆ ಉಪಸ್ಥಿತರಿದ್ದರು.
ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಹಿಂದು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಸುರೇಂದ್ರ ಶೆಟ್ಟಿ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಾಂಶುಪಾಲ ಸುಂದರ ಮೇರ ಸ್ವಾಗತಿಸಿದರು. ಉಪನ್ಯಾಸಕಿ ರಮ್ಯಾ ವಿನಯ ಅತಿಥಿಗಳನ್ನು ಪರಿಚಯಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿ ವಂದಿಸಿದರು. ಉಪನ್ಯಾಸಕಿ ನಿಶಿತಾ ಹಾಗೂ ಶಿಕ್ಷಕಿ ಸುಪ್ರೀತಾ ನಿರೂಪಿಸಿದರು.