ಬರಿಮಾರುವಿನಿಂದ ಬುಡೋಳಿ ಸಂಪರ್ಕಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿರುವುದು. 
ಉಡುಪಿ

ರಸ್ತೆಯುದ್ದಕ್ಕೂ ಬೃಹತ್ ಹೊಂಡ

ಇಂದಿರಾ ಎನ್ ಕೆ
ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಂಟ್ವಾಳ ತಾಲೂಕಿನ ಬರಿಮಾರುವಿನಿಂದ ಬುಡೋಳಿ ಸಂಪರ್ಕಿಸುವ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಬೃಹತ್ ಗುಂಡಿಗಳು ನಿರ್ಮಾಣವಾಗಿ ಸಾರ್ವಜನಿಕರ ಸಂಚಾರ ನರಕಯಾತನೆಯಾಗಿ ಪರಿಣಮಿಸಿದೆ. ಕಳೆದ 15 ವರ್ಷಗಳಿಂದ ಈ ರಸ್ತೆಗೆ ಯಾವುದೇ ರೀತಿಯ ಕಾಯಕಲ್ಪ ಸಿಗದೆ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿವೆ.
ನೂರಾರು ಕುಟುಂಬಗಳು, ವಿದ್ಯಾರ್ಥಿಗಳಿಗೆ ಸಂಕಷ್ಟ: ಈ ರಸ್ತೆಯು ಬರಿಮಾರುವಿನಿಂದ ಬುಡೋಳಿ, ಕಡೇಶಿವಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಸುಮಾರು 70ಕ್ಕೂ ಹೆಚ್ಚು ಮನೆಗಳ ಜನರು ದೈನಂದಿನ ಅಗತ್ಯಗಳಿಗಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಶೇರಾ ಸರ್ಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ನಿತ್ಯ ಇದೇ ಹೊಂಡಮಯ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಸಣ್ಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಭಯಪಡುವಂತಾಗಿದೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ತೀರಾ ಎಚ್ಚರಿಕೆಯಿಂದ ಸಂಚರಿಸಬೇಕಾದ ಸ್ಥಿತಿ ಇದೆ.
ಮನವಿಗಳಿಗೆ ಸಿಗದ ಬೆಲೆ: ಹೊಂಡ ಬಿದ್ದಿರುವ ರಸ್ತೆಯನ್ನು ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಸರಣಿ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಮಳೆಗಾಲ ಆರಂಭವಾಗುವ ಮುನ್ನವೇ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಬೃಹತ್ ಗುಂಡಿಗಳಲ್ಲಿ ಮಳೆ ನೀರು ತುಂಬಿ ಇಲ್ಲಿ ರಸ್ತೆಯಲ್ಲಿ ಹೊಂಡ ಇದೆಯೋ? ಹೊಂಡದಲ್ಲಿ ರಸ್ತೆಯಿದೆಯೋ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

4 ಕಿ.ಮೀ ರಸ್ತೆಯಲ್ಲಿ 2 ಕಿ.ಮೀ ಡಾಂಬರೇ ಇಲ್ಲ!

ಬರಿಮಾರುವಿನಿಂದ ಬುಡೋಳಿಯವರೆಗೆ ಅಂದಾಜು 4 ಕಿಲೋ ಮೀಟರ್ ಉದ್ದದ ರಸ್ತೆಯಿದ್ದು, ಅದರಲ್ಲಿ ಸುಮಾರು 2 ಕಿ.ಮೀ. ರಸ್ತೆಯಲ್ಲಿ ಡಾಂಬರು ಸಂಪೂರ್ಣವಾಗಿ ಕಿತ್ತುಹೋಗಿದೆ. ಪ್ರಸ್ತುತ ಅಲ್ಲಿ ಕೇವಲ ಡಾಂಬರಿನ ಅವಶೇಷಗಳು ಮಾತ್ರ ಉಳಿದುಕೊಂಡಿವೆ. ಮಳೆಗಾಲ ಆರಂಭವಾಗಿರುವುದರಿಂದ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ನಿಲ್ಲುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬರಿಮಾರು-ಬುಡೋಳಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ಪಾದಚಾರಿಗಳು, ವಾಹನಗಳು ಹೋಗಲು ಕಷ್ಟವಾಗುತ್ತಿದೆ. ಈ ರಸ್ತೆ ಸಮಸ್ಯೆ ಬಗ್ಗೆ ಹಲವು ಬಾರಿ ಪಂಚಾಯಿತಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಆದರೆ ರಸ್ತೆ ಇನ್ನೂ ಅಭಿವೃದ್ಧಿ ಕಂಡಿಲ್ಲ.

— ದಿನೇಶ್, ಸ್ಥಳೀಯ ನಿವಾಸಿ