ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಗುಡ್ಡದ ಮಣ್ಣು ತೆರವುಗೊಳಿಸುತ್ತಿದ್ದ ಜೆಸಿಬಿ ಮೇಲೆ ಉರುಳಿ ಬಿದ್ದ ಬೃಹತ್ ಮುರ ಬಂಡೆಕಲ್ಲು.
ವಿಜಯವಾಣಿ ಸುದ್ದಿಜಾಲ ಗುರುಪುರ
ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಗುಡ್ಡಪ್ರದೇಶದಲ್ಲಿ ಸೋಮವಾರ ಮಣ್ಣು ತೆರವುಗೊಳಿಸುತ್ತಿದ್ದ ಜೆಸಿಬಿ ಮೇಲೆ ಬೃಹತ್ ಮುರ ಬಂಡೆಕಲ್ಲು ಉರುಳಿದೆ.
ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಕಳೆದ ವರ್ಷ ಧಾರಾಕಾರ ಮಳೆಗೆ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದಿದ್ದ ಕೆತ್ತಿಕಲ್ ತಿರುವೈಲು ಸರ್ಕಾರಿ ಶಾಲೆಗೆ ಹತ್ತಿರದ ಗುಡ್ದದ ಮೇಲೆ ಕೆಲವು ದಿನಗಳಿಂದ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಹೆದ್ದಾರಿ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದೆ. ಮೊನ್ನೆ ಸುರಿದ ಮಳೆಗೆ ಇಲ್ಲಿ ಭೂಕುಸಿತ ಉಂಟಾಗಿತ್ತು. ಸತತ ಮಳೆಯಾದರೆ ಹೆದ್ದಾರಿಗೆ ಹೊಂದಿಕೊಂಡಿರುವ ಕೆತ್ತಿಕಲ್ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದೆ. ಇದೀಗ ಎನ್‌ಎಚ್ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಇಲ್ಲಿ ಡಿಬಿಎಲ್ ಗುತ್ತಿಗೆ ಸಂಸ್ಥೆ ಗುಡ್ಡದ ಮಣ್ಣು ತೆಗೆದು ಒಂದಷ್ಟು ಜಾಗ ಸಮತಟ್ಟುಗೊಳಿಸಿ ತಡೆಗೋಡೆ ನಿರ್ಮಿಸಲಾರಂಭಿಸಿದೆ.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅರ್ಧದಷ್ಟು ಗುಡ್ಡವೇರಿ ಮಣ್ಣು ತೆರೆವುಗೊಳಿಸುತ್ತಿದ್ದಂತೆ ಏಕಾಏಕಿಯಾಗಿ ಮೇಲಿನಿಂದ ಬೃಹತ್ ಮುರ ಬಂಡೆಕಲ್ಲು ಉರುಳಿ ಜೆಸಿಬಿಯ ಬಕೆಟ್ ಮೇಲೆ ಬಿದ್ದಿದೆ. ಜೆಸಿಬಿ ಹೂತು ಹೋಗಿದೆ. ಚಾಲಕ ಗುಡ್ಡಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಿರುವೈಲು ಶಾಲೆಯಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿ ಪಕ್ಕದ ಗುಡ್ಡದಲ್ಲಿ ಕಳೆದ ವರ್ಷ ಭೂಕುಸಿತ ಉಂಟಾಗಿ, ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಎತ್ತರ, ಇಳಿಜಾರಾದ ಈ ಗುಡ್ಡ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಭೀತಿ ಎದುರಾಗಿದೆ. ಇಲ್ಲಿ ಸಂಪೂರ್ಣವಾಗಿ ಗುಡ್ಡದ ಮಣ್ಣು ತೆರವುಗೊಳಿಸಿದರೆ ಮಾತ್ರ ಮುಂದೆ ಒದಗಬಹುದಾದ ಅಪಾಯ ತಪ್ಪಿಸಲು ಸಾಧ್ಯ. ಸಂಪೂರ್ಣ ಬಿರುಕು ಬಿಟ್ಟಿರುವ ಇಲ್ಲಿ ತಡೆಗೋಡೆ ನಿರ್ಮಿಸಿದರೆ ಪ್ರಯೋಜನವಾಗದು ಎಂದು ಸ್ಥಳೀಯರು ತಿಳಿಸಿದ್ದಾರೆ.