ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಗ್ರಾಮದ ಕೆದ್ದೊಟೆ ಕೆರೆ. 
ಉಡುಪಿ

ಐತಿಹಾಸಿಕ ಕೆರೆಗೆ ಕಾಯಕಲ್ಪ ಭಾಗ್ಯ

ಪ್ರವೀಣ್‌ರಾಜ್ ಕೊಲ
ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಗ್ರಾಮದ ಕೆದ್ದೊಟೆ ಎಂಬಲ್ಲಿರುವ ಯಕ್ಷ ಪಾಂಡವರ ಕೆರೆಗೆ ಕಾಯಕಲ್ಪ ಭಾಗ್ಯ ಒದಗಿದೆ. ಹಲವು ವೈಶಿಷ್ಟಗಳಿಗೆ ಹೆಸರು ಪಡೆದ ಈ ಕೆರೆೆಯ ನೀರು ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಜನರಲ್ಲಿದೆ. ಭಕ್ತಿ ಸ್ವರೂಪದ ಐತಿಹಾಸಿಕ ಕೆರೆ 1 ಕೋಟಿ 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಣಲಿದೆ.
ಅಳತೆಗೂ ನಿಲುಕದಷ್ಟು ಆಳವಿರುವ ಈ ಕೆರೆಯಲ್ಲಿ ಅಪಾರ ಹೂಳು ತುಂಬಿದೆ. 2019ರಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಸಂಪೂರ್ಣ ನೀರು ಬತ್ತಿ ಹೋಗಿ ಕೆರೆಯ ತಳ ಕಂಡಿತ್ತು. ದಾಖಲೆಗಳಲ್ಲಿ ಉಲ್ಲೇಖವಾದಂತೆ ಸುಮಾರು 18 ಎಕರೆಯಷ್ಟು ವಿಸ್ತಾರ ಹೊಂದಿದೆ. ಸರ್ವ ರೋಗ ನಿವಾರಣೆಯ ಗುಣವಿರುವ ಯಕ್ಷ ಪಾಂಡವ ಕೆರೆಗೆ ವಿಶೇಷ ಕ್ತಿಯಿದೆ.

ಚರ್ಮ ರೋಗ ನಿವಾರಣೆ

ಕೆರೆಯ ಪಕ್ಕದಲ್ಲಿ ನಾಗದೇವರ ಕಟ್ಟೆಯಿದ್ದು, ಭಕ್ತರು ಇಲ್ಲಿ ತಮ್ಮ ಕಷ್ಟಗಳ ನಿವಾರಣೆಗೆ ಪ್ರಾರ್ಥಿಸುತ್ತಾರೆ. ವಿಶೇಷವಾಗಿ ಸಂತಾನ ಪ್ರಾಪ್ತಿ, ಮೈಯಲ್ಲಿ ಕಾಣಿಸಿಕೊಳ್ಳುವ ಕೆಡು ಎನ್ನುವ ರೋಗ ಸಹಿತ ವಿವಿಧ ಚರ್ಮ ರೋಗಗಳ ನಿವಾರಣೆಗೆ ಕೆರೆ ನೀರನ್ನು ಬಳಸುತ್ತಾರೆ. ಭಕ್ತರ ಹರಕೆ ಈಡೇರಿದ ಅದೆಷ್ಟೋ ಉದಾಹರಣೆಗಳಿವೆ. ಆದ್ದರಿಂಕ ಕೆರೆಯ ಪಾವಿತ್ರೃ ಕಾಪಾಡಿಕೊಂಡು ಬಂದಿರುವ ಇಲ್ಲಿನ ಜನರು ಇಂದಿಗೂ ಇಲ್ಲಿಗೆ ಬರುವ ಪ್ರವಾಸಿಗರು ಕೆರೆ ನೀರನ್ನು ಮುಟ್ಟದೆ ದೂರದಿಂದಲೇ ನೋಡುವಂತೆ, ಕೊಳಚೆ ನೀರು ಸೇರದಂತೆ ಎಚ್ಚರ ವಹಿಸಿದ್ದಾರೆ. ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆ ಅಭಿವೃದ್ಧಿ ಕಾಣದೆ ಹೂಳು ತುಂಬಿದೆ. ಶಾಸಕರು ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಪಾಂಡವರು ಇಲ್ಲಿಗೆ ಬಂದಿದ್ದರು

ಈ ಕೆರೆ ಪಾಂಡವ ಕೆರೆಯೆಂದು ಹೆಸರು ಪಡೆದಿದೆ. ಪಾಂಡವರು ಜೂಜಾಟದಲ್ಲಿ ಸೋತು 14 ವರ್ಷ ಅಜ್ಞಾತವಾಸದಲ್ಲಿದ್ದ ವೇಳೆ ದ್ರೌಪದಿ ಸೌಗಂಧಿನಿ ಪುಷ್ಪ ಬೇಕೆಂದು ಹಠ ಹಿಡಿದಾಗ ಹುಡುಕಿಕೊಂಡು ಬಂದ ಪಾಂಡವರು ಸುಸ್ತಾಗಿ ಈ ಕೆರೆಯ ನೀರನ್ನು ಕುಡಿದು ಕೆಲಕಾಲ ಇಲ್ಲಿ ಕುಳಿತಿದ್ದರು. ಪಾಂಡವರು ಕುಳಿತಿದ್ದ ಕಲ್ಲನ್ನು ಈಗಲೂ ಇಲ್ಲಿ ಕಾಣಬಹುದು. ಈ ಕ್ಷೇತ್ರದಲ್ಲಿ ಪಾಂಡವರ ಮೂರ್ತಿಗಳು ಕೂಡ ಇವೆ.

ಧಾರ್ಮಿಕ ನಂಬಿಕೆಯುಳ್ಳ ಕೆದ್ದೊಟೆ ಕೆರೆ ಅಭಿವೃದ್ಧಿ ನಡೆಯಲಿದೆ. ಕೆರೆ ಸುತ್ತ ಸ್ವಚ್ಛಗೊಳಿಸುವುದು, ಗುಡ್ಡದಿಂದ ಹರಿಯುವ ನೀರಿಗೆ ಕಾಂಕ್ರೀಟ್ ಚರಂಡಿ ನಿರ್ಮಾಣ, 900 ಮೀ. ಸಂಪರ್ಕ ರಸ್ತೆ, ಕೆರೆಯಿಂದ ಹೆಚ್ಚಾದ ನೀರು ಹೊರ ಹೋಗಲು ವ್ಯವಸ್ಥೆ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಪ್ರಾಕೃತಿಕ ಸೌಂದರ್ಯದ ಕೆದ್ದೊಟೆ ಕೆರೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಕೆರೆಯ ಅನತಿ ದೂರದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿನ ಪಾಂಡವರ ಕುರುಹುಗಳು ಕೆರೆಯ ಬಗ್ಗೆ ಇರುವ ಐತಿಹ್ಯಕ್ಕೆ ಹೋಲಿಕೆಯಾಗುತ್ತವೆ. ಕೆರೆ ಸುತ್ತಲೂ ಹಚ್ಚ ಹಸಿರಿನ ಗುಡ್ಡವಿದೆ. ಪ್ರವಾಸಿತಾಣ ಮಾಡಲು ಹೇಳಿ ಮಾಡಿಸಿದಂತಹ ಪರಿಸರ ಇಲ್ಲಿದ್ದು ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.