ಅರಣ್ಯ ಇಲಾಖೆಯ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿರುವ ಹಿಂಡು.
ಕಡಬ: ಬಳ್ಳ ಪರಿಸರದಲ್ಲಿ ಕೆಲವು ದಿನಗಳಿಂದ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಐತೂರು ಗ್ರಾಮದತ್ತ ತೆರಳಿ, ಕೊರಿಯರ್ ಸಮೀಪದ ಅರಣ್ಯ ಇಲಾಖೆಯ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಎರಡು ಮರಿಯಾನೆ ಸೇರಿದಂತೆ ಒಟ್ಟು ಎಂಟು ಕಾಡಾನೆಗಳು ಹಿಂಡಿನಲ್ಲಿರುವುದು ಕಂಡುಬಂದಿದೆ. ಬಳ್ಳ ಗ್ರಾಮದ ಪಠೋಳಿ ಭಾಗದಲ್ಲಿ ಆನೆಗಳ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ದಾರಿಯಲ್ಲಿದ್ದ ಬೈನೆ ಮರಗಳನ್ನು ಮುರಿದು ಹಾನಿಗೊಳಿಸಿವೆ.
ಬಳಿಕ ಎಣ್ಣೆಮಜಲು ಸಮೀಪದ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿದ ಆನೆಗಳ ಹಿಂಡು ನದಿ ದಾಟಿ ಐತೂರು ಗ್ರಾಮದ ಏನ್‌ಕೂಪ್ ಕ್ವಾರ್ಟರ್ಸ್ ಹಾಗೂ ಓಟಕಜೆ ಪರಿಸರದ ಮೂಲಕ ಅರಣ್ಯ ಇಲಾಖೆಯ ರಬ್ಬರ್ ತೋಟವನ್ನು ಪ್ರವೇಶಿಸಿ ಅಲ್ಲಿಯೇ ಠಿಕಾಣಿ ಹೂಡಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿದ್ದು, ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿನತ್ತ ಹಿಮ್ಮೆಟ್ಟಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.