ಚಿಣ್ಣರ ತಂಗುದಾಣಕ್ಕೆ ಭೇಟಿ ನೀಡಿ 50 ಸಾವಿರ ರೂ.ಗೂ ಅಧಿಕ ಮೌಲ್ಯದ ದೈನಂದಿನ ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಕ್ರೀಡಾ ಉಪಕರಣಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಹಸ್ತಾಂತರಿಸಿದರು. 
ಉಡುಪಿ

ಚಿಣ್ಣರ ತಂಗುದಾಣಕ್ಕೆ ನೆರವಿನ ಹಸ್ತ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಂಗಳೂರಿನ ನಿರಾಶ್ರಿತ ಮಕ್ಕಳ ಆಶ್ರಯತಾಣ ಚಿಣ್ಣರ ತಂಗುದಾಣಕ್ಕೆ ಭೇಟಿ ನೀಡಿ 50 ಸಾವಿರ ರೂ.ಗೂ ಅಧಿಕ ಮೌಲ್ಯದ ದೈನಂದಿನ ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಕ್ರೀಡಾ ಉಪಕರಣಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶದೊಂದಿಗೆ ಆಚರಿಸಲಾದ ಸಂಪ್ರದಾಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಸಾಂಪ್ರದಾಯಿಕ ಆಹಾರ ಮೇಳ ಹಾಗೂ ವಿವಿಧ ರಾಜ್ಯಗಳ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುವ ಪ್ರದರ್ಶನಗಳು ನಡೆದವು. ಕೇರಳ ರಾಜ್ಯದ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟ ಪಡೆದುಕೊಂಡಿತು.
ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗೂ ಕೈಜೋಡಿಸುವ ಉದ್ದೇಶದಿಂದ ಆಹಾರ ಮೇಳದಿಂದ ಸಂಗ್ರಹವಾದ ಮೊತ್ತವನ್ನು ಪ್ರತೀ ವರ್ಷದಂತೆ ಸಮಾಜಮುಖಿ ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಯಿತು. ಕಳೆದ ವರ್ಷದ ಟ್ರೆಡಿಷನಲ್ ಡೇ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ 1ಲಕ್ಷ ರೂ.ಮೊತ್ತವನ್ನು ಮಣಿಪುರ ಸಂಘರ್ಷದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ನೆರವಿನ ರೂಪದಲ್ಲಿ ನೀಡಲಾಗಿತ್ತು.

ಶಿಕ್ಷಣವು ಪಠ್ಯಜ್ಞಾನಕ್ಕೆ ಸೀಮಿತವಾಗಿರದೆ, ಸಮಾಜದ ನೋವಿಗೆ ಸ್ಪಂದಿಸುವ ಮನಸ್ಸನ್ನು ರೂಪಿಸಬೇಕು. ಸಂಪ್ರದಾಯ ದಿನಾಚರಣೆ ಮೂಲಕ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿತುಕೊಳ್ಳುವುದರ ಜತೆಗೆ ಸಮಾಜದತ್ತ ತಮ್ಮ ಹೊಣೆಗಾರಿಕೆಯನ್ನು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ಈ ಮನೋಭಾವ ಯುವಜನರಲ್ಲಿ ಮಾನವೀಯತೆ, ಸಹಾನುಭೂತಿ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುತ್ತದೆ.

— ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ