ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪೋಸ್ಟರ್‌ಗಳು.
ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹವಾಮಾನ ವೈಪರೀತ್ಯದಿಂದ ಈಗಾಗಲೇ ವನ್ಯಜೀವಿಗಳು ಕಂಗಾಲಾಗಿವೆ. ಇದೇ ಸಮಯಕ್ಕೆ ವನ್ಯಜೀವಿ ಪ್ರವಾಸೋದ್ಯಮದ ಹೆಸರಿನಲ್ಲಿ ನಟ್ಟಿರುಳು 15-20 ಜನರು ತಂಡೋಪತಂಡವಾಗಿ ಪಶ್ಚಿಮಘಟ್ಟದ ದಟ್ಟ ಕಾನನದೊಳಗೆ ಪ್ರವೇಶಿಸುತ್ತಿರುವುದು ವನ್ಯಮೃಗಗಳನ್ನು ಶೋಷಣೆಗೆ ಗುರಿಪಡಿಸಿದೆ ಎಂಬ ಗಂಭೀರ ಆರೋಪ ಪರಿಸರ ಪ್ರೇಮಿಗಳ ವಲಯದಿಂದ ಕೇಳಿಬಂದಿದೆ.
ಮಲೆನಾಡಿನಲ್ಲಿ ವಾನ್ಸೂನ್ ವಾರಾಂತ್ಯಗಳಲ್ಲಿ ಹರ್ಪಿಂಗ್, ನೈಟ್ ಟ್ರಾವೆಲ್ಸ್(ರಾತ್ರಿ ತಿರುಗಾಟ), ಫ್ರಾಗ್ ವಾಕ್, ಫೋಟೋಗ್ರಫಿ ಮೊದಲಾದ ಹೆಸರಿನಲ್ಲಿ ಅನಧಿಕೃತ ಕಾರ್ಯಾಗಾರ, ಶಿಬಿರಗಳು ಆಗುಂಬೆ, ಶಿರಸಿ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮಟ್ಟ ಭಾಗದಲ್ಲಿ ಹೆಚ್ಚುತ್ತಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳ ಟ್ರಾವೆಲ್ ಏಜೆನ್ಸಿಗಳು, ಫೋಟೋಗ್ರಫಿ ಸಂಸ್ಥೆಗಳು ಮಲೆನಾಡಿನ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, 10-25 ಸಾವಿರ ರೂ.ವರೆಗೆ ಶುಲ್ಕ ಪಡೆಯುತ್ತಿವೆ ಎನ್ನಲಾಗಿದೆ.
ಹಣ ಗಳಿಕೆ ಇರಾದೆ!
ರಾತ್ರಿ ಟಾರ್ಚ್ ಹಿಡಿದು ಕಾಡಿನಲ್ಲಿ, ಹಳ್ಳ, ತೊರೆಗಳಲ್ಲಿ ಸಂಚರಿಸುತ್ತಾರೆ. ಕಪ್ಪೆ, ಹಾವು, ಜೇಡ ಸೇರಿದಂತೆ ವನ್ಯಜೀವಿಗಳನ್ನು ಅರಸಿ ಅತ್ಯಾಧುನಿಕ ಕ್ಯಾಮರಾಗಳು, ಲೆನ್ಸ್ ಮೂಲಕ ಫ್ಲಾೃಶ್‌ಲೈಟ್ ಬಿಟ್ಟು ಫೋಟೋಗ್ರಫಿ, ವಿಡಿಯೋಗ್ರಫಿ ವಾಡಲಾಗುತ್ತಿದೆ. ಅತ್ಯಾಕರ್ಷಕ ಫೋಟೋ, ವಿಡಿಯೋಗಳಿಗಾಗಿ ಹಾವು, ಕಪ್ಪೆ ಮೊದಲಾದ ಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಮಾಡಲಾಗುತ್ತದೆ. ಅವುಗಳ ಆಹಾರ, ಸಂತಾನೋತ್ಪತ್ತಿ, ಓಡಾಟಕ್ಕೆ ತಡೆಯೊಡ್ಡಿ ವನ್ಯಜೀವಿಗಳ ಮೇಲೆ ಶೋಷಣೆ ನಡೆಯುತ್ತಿದೆ. ಇದರಲ್ಲಿ ಶೈಕ್ಷಣಿಕ ಚಟುವಟಿಕೆ, ಅಧ್ಯಯನ, ಸಂಶೋಧನೆ, ಸಂರಕ್ಷಣೆ ಉದ್ದೇಶ ಕಾಣದಂತಾಗಿದೆ. ವನ್ಯಜೀವಿ ಪ್ರವಾಸೋದ್ಯಮ ಟ್ರೆಂಡ್ ಆಗಿ ಬದಲಾಗುತ್ತಿದ್ದು, ಅದಕ್ಕೆ ಹರ್ಪಿಂಗ್, ಫೋಟೋಗ್ರಫಿಯಂತಹ ವನ್ಯಜೀವಿ ಕೇಂದ್ರಿತ ಆಕರ್ಷಣೀಯ ಚಟುವಟಿಕೆಗಳು ಹುಟ್ಟಿಕೊಂಡಿವೆ. ಮನರಂಜನೆ, ಫೋಟೋಗ್ರಫಿ, ಹಣ ಗಳಿಕೆ ಇರಾದೆಯೇ ಇದರ ಹಿಂದಿರುವ ಪ್ರಮುಖ ಮಾನದಂಡ ಎಂಬುದು ಪ್ರಕೃತಿ ಪ್ರಿಯರ ಆರೋಪ.
ಹಾವುಗಳನ್ನು ತಂದಿರಿಸಿ ಫೋಟೋಗ್ರಫಿ
ಹಣ ದಾಹಕ್ಕಾಗಿ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಡ್ ವೈಪರ್‌ಗಳನ್ನು ತಂದಿರಿಸಿ ಫೋಟೋಗ್ರಫಿ ವಾಡಲಾಗುತ್ತದೆ. ಈ ಹಾವುಗಳು ಹೆಚ್ಚು ದೂರ ಚಲಿಸುವುದಿಲ್ಲ. ಒಮ್ಮೆ ಕಾಡಿನಿಂದ ತಮ್ಮ ಪರಿಸರಕ್ಕೆ ತಂದಿರಿಸಿದರೆ, ಅಲ್ಲೇ ಸುತ್ತಮುತ್ತ ಸಂಚರಿಸಿಕೊಂಡು ಇರುತ್ತವೆ. ವಿವಿಧ ವರ್ಣಗಳಲ್ಲಿ ಕಂಡುಬರುವ, ಚಿತ್ತಾಕರ್ಷಕವಾಗಿರುವ ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಟ್ ವೈಪರ್‌ಗಳು ವನ್ಯಜೀವಿ ಛಾಯಾಗ್ರಾಹಕರ ಆಕರ್ಷಣೆಯಾಗಿವೆ. ಅದಕ್ಕಾಗಿ ಎಲ್ಲ ಕಾನೂನು ಮತ್ತು ನೈತಿಕ ಗೆರೆಗಳನ್ನು ದಾಟಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅರಣ್ಯ ಇಲಾಖೆಯಿಂದಿಲ್ಲ ಕ್ರಮ
ಇಂತಹ ಅಕ್ರಮ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕುತ್ತಿಲ್ಲ. ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ಯಾವುದೇ ಅಧಿಕೃತ ಯೋಜನೆ, ಪೂರ್ವಾನುಮತಿ, ಮೇಲ್ವಿಚಾರಣೆ, ನಿಯಂತ್ರಣ, ದಾಖಲಾತಿ ನಿರ್ವಹಣೆ, ಅಗತ್ಯ ಬಂದಾಗ ಅವುಗಳ ತಪಾಸಣೆ ಯಾವುದೂ ಇಲ್ಲದೆ ತಮಗಿಷ್ಟ ಬಂದಂತೆ ನಡೆಸುತ್ತಿರುವ ಚಟುವಟಿಕೆಗಳಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.
ವನ್ಯಜೀವಿ ಕೇಂದ್ರಿತ ಚಟುವಟಿಕೆಗಳಿಗೆ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಸಂಪೂರ್ಣ ನಿಷೇಧ ಹೇರಬೇಕು. ಸಂಶೋಧನೆ, ಅಧ್ಯಯನ, ಶೈಕ್ಷಣಿಕ ಉದ್ದೇಶ ಇಲ್ಲದ ಇಂತಹ ಅನಧಿಕೃತ ಚಟುವಟಿಕೆಗಳಿಂದ ವನ್ಯಜೀವಿಗಳ ಶೋಷಣೆ ಆಗುತ್ತಿದೆಯೇ ಹೊರತು ಯಾವುದೇ ಜಾಗೃತಿ, ಸಂರಕ್ಷಣೆ ಆಗುತ್ತಿಲ್ಲ. ಹೆಚ್ಚಿನ ಕಡೆ ಅರಣ್ಯ, ವನ್ಯಜೀವಿ ಕಾನೂನುಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಇಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮುಗ್ಧಜೀವಿಗಳನ್ನು ಶೋಷಣೆ ವಾಡಲಾಗುತ್ತಿದೆ.
— ನಾಗರಾಜ ಕೂವೆ ಮೂಡಿಗೆರೆ ಪರಿಸರವಾದಿ
ಅರಣ್ಯದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಅವಕಾಶವಿಲ್ಲ. ಕೆಲವರು ಸಂ ಸಂಸ್ಥೆಗಳ ನಡೆಸಿಕೊಂಡು ಪೋಸ್ಟರ್‌ಗಳ ಮೂಲಕ ಚಟುವಟಿಕೆ ನಡೆಸುತ್ತಾರೆ. ಅವರಿಗೆ ನೋಟಿಸ್ ನೀಡಿ ಎಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂಬುದನ್ನು ವಾಹಿತಿ ಪಡೆದಿದ್ದೇವೆ. ವನ್ಯಜೀವಿಗಳಿಗೆ ಉಪಟಳ ನೀಡಲು ಎಂದಿಗೂ ಅವಕಾಶ ನೀಡುವುದಿಲ್ಲ.
— ಡಾ.ಅಜ್ಜಯ್ಯ ಜಿ.ಆರ್. ಶಿವಮೊಗ್ಗ ಡಿಸಿಎಫ್ ಪ್ರಾದೇಶಿಕ ವಿಭಾಗ
ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ದೂರುಗಳು ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಲು ತಿಳಿಸಿದ್ದೇನೆ.
— ಕುಮಾರ್ ಪುಷ್ಕರ್ ಪಿ.ಸಿ.ಸಿ.ಎಫ್. ವರ್ಲ್ಡ್ ಲೈಫ್ ವಿಭಾಗ ಬೆಂಗಳೂರು