ಉಡುಪಿಯಲ್ಲಿ ಆಯೋಜಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಮಂಜುನಾಥ ಪೂಜಾರಿ, ಚಂದ್ರಶೇಖರ ಶೆಟ್ಟಿ, ನಾರಾಯಣಸ್ವಾಮಿ ಎಂ. ಇನ್ನಿತರರಿದ್ದರು. 
ಉಡುಪಿ

ಜಗಕ್ಕೆ ಶ್ರೀರಾಮನ ಶಕ್ತಿ-ಭಕ್ತಿ ತಿಳಿಸಿದ ಶ್ರೇಷ್ಠ ಮಹರ್ಷಿ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಮತ

* ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಬ್ರಹ್ಮಾಂಡದ ಸರ್ವಶ್ರೇಷ್ಠ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಗಳನ್ನು ನಮಗೆ ತಿಳಿಸಿಕೊಟ್ಟವರು ಮಹರ್ಷಿ ವಾಲ್ಮೀಕಿ. ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಅತ್ಯುನ್ನತ ಆಡಳಿತ ನೀಡಿದ್ದ ಶ್ರೀರಾಮನ ವ್ಯಕ್ತಿತ್ವವನ್ನು ರಾಮಾಯಣ ಗ್ರಂಥದ ಮೂಲಕ ಶಾಶ್ವತವಾಗಿಸಿದ ಖ್ಯಾತಿ ಅವರದ್ದು. ವಾಲ್ಮೀಕಿ ಹೆಸರಿನಲ್ಲಿ ನೀಡಲಾಗುವ ಸರ್ಕಾರದ ಯೋಜನೆಗಳು ನ್ಯಾಯಯುತವಾಗಿ ಸಮುದಾಯಕ್ಕೆ ತಲುಪಿದಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣ ಆಗುತ್ತದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯಪಟ್ಟರು.

ಉಡುಪಿ ಜಿಪಂನ ಡಾ. ವಿ.ಎಸ್​ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಉಡುಪಿ ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಉಡುಪಿ ವತಿಯಿಂದ ಸೋಮವಾರ (ಅ.25) ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೃಷ್ಟಾಂತದ ಜೀವನ

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮಾತನಾಡಿ, ಮಹರ್ಷಿ ವಾಲ್ಮೀಕಿಯ ಜೀವನವೇ ನಮಗೆಲ್ಲ ದೃಷ್ಟಾಂತವಾಗಿದೆ. ಕೊಲೆ, ಸುಲಿಗೆ, ಲೂಟಿಯಂತಹ ಕಾರ್ಯ ಮಾಡುತ್ತಿದ್ದ ವಿಕೃತ ಬದುಕು ಅವರದ್ದಾಗಿತ್ತು. ನಾರದರ ಮಾರ್ಗದರ್ಶನದಿಂದ ಕೈಗೊಂಡ ಒಂದು ಕ್ಷಣದ ಉತ್ತಮ ನಿರ್ಧಾರ ಅವರ ಬದುಕನ್ನೇ ಬದಲಾಯಿಸಿತು. ಅದೆಷ್ಟೋ ಹಿಂಸಾತ್ಮಕ ಕಾರ್ಯ ಮಾಡಿದ್ದ ಅವರ ಕೈಗಳು ರಾಮಾಯಣದಂತಹ ಶ್ರೇಷ್ಠ ಗ್ರಂಥ ರಚಿಸಿದವು. ಪ್ರಯತ್ನಪೂರ್ವಕವಾಗಿ ನಾವು ಇತರರಿಗೆ ಸದಾ ಒಳ್ಳೆಯದನ್ನೇ ಮಾಡಬೇಕು ಎಂದರು.

ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿದರು. ಕೋಟೇಶ್ವರ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ಉಪ ಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಉಪನ್ಯಾಸ ನೀಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ ನಾಯಕ, ಪರಿಶಿಷ್ಟ ವರ್ಗಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಎಂ. ಸ್ವಾಗತಿಸಿದರು. ಐಟಿಡಿಪಿ ಸಿಬ್ಬಂದಿ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.

ಸಮುದಾಯದ ಸಾಧಕರಿಗೆ ಸನ್ಮಾನ

ಕಳೆದ ವರ್ಷ ಎಸ್​ಎಸ್​ಎಲ್​ಸಿಯಲ್ಲಿ ಸಾಧನೆ ಮಾಡಿದ ಕೊರಗ, ಮರಾಠಿ ನಾಯಕ ಹಾಗೂ ಮಲೆಕುಡಿಯ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 619 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದ ಚೇರ್ಕಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮಂಜುನಾಥನಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು. ಪದವಿ ಪೂರ್ವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮನೀಷಾ, ಅಶ್ವಿತಾ, ಶ್ರಾವ್ಯಾ, 10ನೇ ಹೆಚ್ಚು ಅಂಕ ಗಳಿಸಿದ ಸ್ವಸ್ತಿ, ಲಾವಣ್ಯಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೋಣಯ್ಯ ರೆಂಜಾಳ, ಡಾ.ಅಶ್ವಿತಾ ಹಾಗೂ ಮಹಾಬಲ ನಾಯ್ಕ ಅವರನ್ನು ಗೌರವಿಸಲಾಯಿತು.

ಕೊರಗ ಸಮುದಾಯ ವಿಮೆ, ಆಹಾರದ ಕಿಟ್​, ವಿದ್ಯಾರ್ಥಿ ವೇತನ ದೊರಕದೆ ಸಮಸ್ಯೆಯಲ್ಲಿದೆ. ಸರ್ಕಾರವು ಪ.ಜಾತಿ ಹಾಗೂ ಪ.ಪಂಗಡದವರಿಗಾಗಿ ಹಲವು ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಇಲಾಖೆಯಿಂದ ಆಗಬೇಕು. ಆಚರಣೆಗಳು ಕೇವಲ ಮಾಲಾರ್ಪಣೆಗೆ ಸೀಮಿತವಾಗದೆ ಯೋಜನೆಗಳ ಲಾಭ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು.
ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.