ಮಕ್ಕಳ ಸಂತೆ’ ವ್ಯಾಪಾರ ಭರ್ಜರಿ
ಗುರುಪುರ : ವಾಮಂಜೂರು ತಿರುವೈಲು ದ.ಕ ಜಿಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸೊಪ್ಪು-ತರಕಾರಿ, ತಂಪು ಪಾನೀಯ, ಫ್ಯಾನ್ಸಿ, ಹಣ್ಣುಹಂಪಲು, ಬಟ್ಟೆಬರೆ ಮತ್ತಿತರ ಸೊತ್ತಗಳ ಮಾರಾಟದ ಮಕ್ಕಳೇ ಜವಾಬ್ದಾರಿ ಹೊತ್ತು ನಿರ್ವಹಿಸಿದ ‘ಮಕ್ಕಳ ಸಂತೆ’ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂತೆ ವ್ಯವಸ್ಥೆಗೊಳಿಸಲಾಗಿತ್ತು.
ಮೈದಾನ ತುಂಬೆಲ್ಲ ಗ್ರಾಹಕರು
ಶಾಲಾ ಆಡಳಿತ ಮಂಡಳಿ, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ವೃಂದ ಹಾಗೂ ಊರವರ ಸಹಕಾರದಲ್ಲಿ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಬೃಹತ್ ಸಂತೆಯಲ್ಲಿ ಮಕ್ಕಳ ಪೋಷಕರ ಸಹಿತ ನೂರಾರು ಗ್ರಾಹಕರು ಕಂಡು ಬಂತು.
ತಮ್ಮ ಮನೆಗಳಲ್ಲಿ ಬೆಳೆದ ಬೆಂಡೆ, ಬಸಳೆ, ಹರಿವೆ, ಸೌತೆಕಾಯಿ, ಸೋರೆಕಾಯಿ, ಅಲಸಂಡೆ ಮತ್ತಿತರ ಸೊಪ್ಪು ತರಕಾರಿ ಮಾರಾಟದ 10 ವಿದ್ಯಾರ್ಥಿಗಳು ಒಂದು ಸಾಲಿನಲ್ಲಿದ್ದರೆ, ಇನ್ನೊಂದು ಸಾಲಿನಲ್ಲಿ ಫ್ಯಾನ್ಸಿ, ಸೀರೆ, ಮಿಡಿಮಾವು, ಹಲಸು, ಚುರುಮುರಿ, ಪಾನಿಪುರಿ, ಗೋಳಿ ಸೋಡಾ, ತಂಪುಪಾನೀಯ, ಐಸ್‌ಕ್ರೀಂ, ಉಪ್ಪಿನಕಾಯಿ, ಸೀಯಾಳ, ತೆಂಗಿನಕಾಯಿ ಮಾರಾಟ ಮಾಡುತ್ತಿದ್ದ ಇನ್ನೂ 20 ಮಂದಿ ವಿದ್ಯಾರ್ಥಿಗಳಿದ್ದರು. ಅಪೂರ್ವವೆನ್ನಲಾದ ನುಗ್ಗೆಸೊಪ್ಪು ಮತ್ತು ಅತ್ತಿಕಾಯಿ ಹಲವರ ಗಮನಸೆಳೆಯಿತು. ಮಕ್ಕಳ ಸಂತೆಗೆ ಭೇಟಿ ನೀಡಿದ ಬಿಇಒ ಈಶ್ವರ್ ಸಂತೋಷ ವ್ಯಕ್ತಪಡಿಸಿದರು.
ವ್ಯಾಪಾರದಿಂದ ಬರುವ ಲಾಭ ನಷ್ಟವೆಲ್ಲ ವಿದ್ಯಾರ್ಥಿಗಳಿಗೆ ಸೇರಿದ್ದಾಗಿದೆ. ಗಣಿತದಲ್ಲಿ ಮಕ್ಕಳನ್ನು ಪಳಗಿಸುವ ಮತ್ತು ಕೃಷಿಯಲ್ಲಿ ರೈತರ ಶ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪ್ರಯತ್ನ ಮಕ್ಕಳ ಸಂತೆಯದ್ದಾಗಿದೆ. ತನ್ನದೇ 20 ಸೆಂಟ್ಸ್ ಗದ್ದೆಯಲ್ಲಿ ಸಾವಯವ ಗೊಬ್ಬರ ಹಾಕಿ ಬೆಳೆಸಿದ ವಿವಿಧ ತರಕಾರಿಯನ್ನು ಸಂತೆಗೆ ಉಚಿತವಾಗಿ ನೀಡಿದ್ದೇವೆ ಎಂದು ಶಾಲೆಯ ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ರಘು ಸಾಲ್ಯಾನ್ ತಿಳಿಸಿದರು.
ಇಂದು ನಾವೇ ಮಾರುಕಟ್ಟೆ ನಿರ್ವಹಿಸಿದ್ದೇವೆ. ವ್ಯಾಪಾರದಲ್ಲಿ ಲಾಭಕ್ಕಾಗಿ ಎಷ್ಟು ಕಷ್ಟಪಡಬೇಕು ಎಂಬುದು ಗೊತ್ತಾಯಿತು. ಸಂತೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಖುಷಿಯಾಯಿತು. ಗ್ರಾಹಕರ ಆಕರ್ಷಣೆಗಾಗಿ ಏನೇನು ಮಾಡಬೇಕು ಎಂಬುದು ಸ್ವಲ್ಪ ಮಟ್ಟಿಗೆ ತಿಳಿಯಿತು. ವ್ಯಾಪಾರ ಉತ್ತಮವಾಗಿತ್ತು.
ಇದೊಂದು ಉತ್ತಮ ಅನುಭವ. ರೈತರ ಶ್ರಮ, ಮಾರಾಟಗಾರರ ಕಷ್ಟ ಅನುಭವಕ್ಕೆ ಬಂತು. ಕಲಿಕೆಗೆ ಪೂರಕವಾದ ಸಂತೆ ಇದಾಗಿದೆ.
ಮಕ್ಕಳ ಸಂತೆಯ ಲಾಭ ನಷ್ಟವೆಲ್ಲ ಮಕ್ಕಳು ಮತ್ತು ಅವರ ಪಾಲಕರಿಗೆ ಸೇರಿದ್ದಾಗಿದೆ. ಇದುವರೆಗೆ ಸಿಬಿಎಸ್‌ಸಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ನಮ್ಮ ಶಾಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ.