ಉಪ್ಪಿನಂಗಡಿಯಲ್ಲಿ ಶ್ರೀಧರಯಾನ ಕೃತಿ ಬಿಡುಗಡೆ ನಡೆಯಿತು. ಪೂಕಳ ಲಕ್ಷ್ಮೀನಾರಾಯಣ ಭಟ್, ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಮೋಹನ ಕುಂಟಾರು ಮೊದಲಾದವರಿದ್ದರು.
ಉಪ್ಪಿನಂಗಡಿ: ಯಕ್ಷಗಾನ ಕಲೆಯನ್ನು ಪ್ರೇಕ್ಷಕರ ಮಟ್ಟಕ್ಕೆ ಇಳಿಸಬೇಡಿ. ಬದಲಾಗಿ ಪ್ರೇಕ್ಷಕರನ್ನು ಯಕ್ಷಗಾನ ಕಲೆಯ ಮಟ್ಟಕ್ಕೆ ಏರಿಸಬೇಕಾಗಿದೆ ಎಂದು ಯಕ್ಷಗಾನ ಅರ್ಥಧಾರಿ, ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಕರೆ ನೀಡಿದರು.
ಉಪ್ಪಿನಂಗಡಿಯಲ್ಲಿ ಭಾನುವಾರ ಮಧ್ಯಾಹ್ನ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮರಣೆ ಕಾರ್ಯಕ್ರಮದಲ್ಲಿ ಸ್ಮತಿ ಗೌರವ ಸ್ವೀಕರಿಸಿ ಮಾತನಾಡಿದರು.
ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಮೋಹನ ಕುಂಟಾರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರಿಗೂ ಸಮಾಜಕ್ಕೂ ಹಿಂದೆ ಸಾಮಾಜಿಕ ಕಂದಕವಿತ್ತು. ಆದರೆ ಈಗ ಹಾಗಿಲ್ಲ. ಕಲಾವಿದರಿಗೆ ಮನ್ನಣೆ ದೊರಕುತ್ತಿದೆ. ಈಗಿನ ಕಲಾವಿದರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ ಎಂದರು.
ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಚಿನ್ನಪ್ಪ ಗೌಡ, ನಾ.ಕಾರಂತ ಪೆರಾಜೆ ಸಂಪಾದಕತ್ವದ ಶ್ರೀಧರಯಾನ ಕೃತಿ ಬಿಡುಗಡೆ ಮಾಡಿದರು. ಉಪ್ಪಿನಂಗಡಿಯ ವೈದ್ಯ ಡಾ.ಸುಪ್ರೀತ್ ಲೋಬೊ, ವಿಶ್ರಾಂತ ಪ್ರಾಧ್ಯಾಪಕ ಪೂವಪ್ಪ ಶೆಟ್ಟಿ ಅಳಿಕೆ ಕುಂಬಳೆ ಶ್ರೀಧರ ರಾವ್ ಸ್ಮರಣೆ ಮಾಡಿದರು. ಸ್ಮತಿ ಗೌರವ ಕಾರ್ಯಕ್ರಮ ನಡೆಯಿತು. ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಗೌರವ ಸ್ವೀಕರಿಸಿದರು. ದೇವಿಪ್ರಸಾದ ಕುಂಬ್ಳೆ ಸನ್ಮಾನಪತ್ರ ವಾಚಿಸಿದರು.
ಶ್ರೀಧರ ರಾವ್ ಅವರ ಪತ್ನಿ ಸುಲೋಚನಾ ಶ್ರೀಧರ ರಾವ್, ಮಕ್ಕಳಾದ ಗಣೇಶ ಪ್ರಸಾದ ಕುಂಬ್ಳೆ, ದೇವಿಪ್ರಸಾದ ಕುಂಬ್ಳೆ ಉಪಸ್ಥಿತರಿದ್ದರು. ಕುಂಬಳೆ ಶ್ರೀಧರ ರಾವ್ ಸಹೋದರ ಗೋಪಾಲ ಕುಂಬ್ಳೆ ಸ್ವಾಗತಿಸಿದರು. ಹಿರಿಯ ಕಲಾವಿದ, ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಪ್ರಸಾದ ಕುಂಬ್ಳೆ ವಂದಿಸಿದರು.