ಶ್ರೀಕೃಷ್ಣ ಸಂಧಾನ ತಾಳಮದ್ದಳೆ ಸಂದರ್ಭ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಅಜಯ್ ದೀಕ್ಷಿತ್ ಶೆಟ್ಟಿ, ದಯಾನಂದ ಪೈ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪಂಚಭೂತ ಮತ್ತು ಪಂಚೇಂದ್ರಿಯ ತತ್ವಗಳ ಪಾರಮಾರ್ಥಿಕ ಸತ್ಯ ಹಾಗೂ ಕರ್ಮಸಿದ್ಧಾಂತವನ್ನು ವಿಸ್ತರಿಸಿ ತಿಳಿಸುವ ಯಕ್ಷಗಾನ ತಾಳಮದ್ದಳೆ, ಸನಾತನ ಧರ್ಮದ ಭಾರತೀಯ ದರ್ಶನದ ಪ್ರವೇಶಕ್ಕೆ ಸುಲಭ ಮಾರ್ಗವಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಜೈನ ಮಠದ ಸಭಾಂಗಣದಲ್ಲಿ ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ಶ್ರಾವಣಶ್ರವ್ಯ-ವಾಙ್ಮಯೋತ್ಸವದ ಶ್ರೀಕೃಷ್ಣ ಸಂಧಾನ ತಾಳಮದ್ದಳೆ ಉದ್ಘಾಟಿಸಿ ಮಾತನಾಡಿದರು.
ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನಮಂತ ದೇವಸ್ಥಾನದ ಮೊಕ್ತೇಸರ ದಯಾನಂದ ಪೈ ಅಧ್ಯಕ್ಷತೆ ವಹಿಸಿ, ಮೂಡುಬಿದಿರೆಯಲ್ಲಿರುವ ಆಮ್ನಾಯಃ ಯಕ್ಷ ಬಳಗ ಸೇರಿದಂತೆ 10ಕ್ಕೂ ಹೆಚ್ಚಿನ ಯಕ್ಷಗಾನ ಸಂಘಟನೆಗಳು ಸನಾತನ ಧರ್ಮದ ಹಿರಿಮೆ-ಗರಿಮೆಯನ್ನು ಬಿತ್ತರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತಿವೆ ಎಂದರು.
ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಉದ್ಯಮಿ ಅಜಯ್ ದೀಕ್ಷಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವಿಮರ್ಶಕ ಎಂ.ಶಾಂತಾರಾಮ ಕುಡ್ವ ಮುಖ್ಯ ಅತಿಥಿಯಾಗಿದ್ದರು. ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗದ ಸಂಚಾಲಕ ಡಾ.ವಿನಾಯಕ ಭಟ್ ಗಾಳಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗವತ ಶಿವಪ್ರಸಾದ್ ಭಟ್ ಕಾಂತಾವರ ನಿರೂಪಿಸಿದರು.