ಪೂರ್ವಭಾವಿ ಸಭೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ದೇವದಾಸ್ ಭಂಡಾರಿ, ಮುಡಿಪು ಧ್ಯಾನ ಕೇಂದ್ರದ ಟ್ರಸ್ಟೀ ಶೈಲೇಂದ್ರ ಭರತ್ ನಾಯಕ್ ನಚ್ಚಗುತ್ತು, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ ಉಪಸ್ಥಿತರಿದ್ದರು. 
ಉಡುಪಿ

ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸಲು ಮೇಳ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸರ್ಕಾರಿ ಸವಲತ್ತು ಎಲ್ಲರಿಗೂ ತಲುಪಿಸಲು ಅಧಿಕಾರಿಗಳಿಗೆ ಅಸಾಧ್ಯ ಎನ್ನುವ ನೆಲೆಯಲ್ಲಿ ಇಲಾಖೆ ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮನರಂಜನೆ ಕಾರ್ಯಕ್ರಮಗಳ ಜತೆ ಅಧಿಕಾರಿಗಳನ್ನು ಭಾಗವಹಿಸುವಂತೆ ಮಾಡಿ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸಲು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭರವಸೆ ನೀಡಿದರು.
ಮುಡಿಪು ಉತ್ಸವ ಸಮಿತಿ ಆಶ್ರಯದಲ್ಲಿ ಏ.24ರಿಂದ 26ರವರೆಗೆ ಮುಡಿಪು ಶ್ರೀ ಕೃಷ್ಣ ಧ್ಯಾನ ಮಂದಿರ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಯಲಿರುವ ಕೃಷಿ, ಆಹಾರ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಬುಧವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮುಡಿಪು ಧ್ಯಾನ ಕೇಂದ್ರದ ಟ್ರಸ್ಟಿ ಶೈಲೇಂದ್ರ ಭರತ್ ನಾಯಕ್ ನಚ್ಚಗುತ್ತು, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಎಸ್.ನಾಸೀರ್ ನಡುಪದವು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಉದ್ಯಮಿ ರಮೇಶ್ ಶೇಣವ, ಕುರ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ್ ನಾಯಕ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಬಂಟ್ವಾಳ ತಾಪಂ ಮಾಜಿ ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ದೇವದಾಸ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮಗಳ ರೂಪುರೇಷೆ

ಜಾನುವಾರು ಪ್ರದರ್ಶನ, ಸ್ವಸಹಾಯ ಸಂಘಗಳ ಉತ್ಪನ್ನ ಪ್ರದರ್ಶನ, ಮಾರಾಟ ವ್ಯವಸ್ಥೆ ಇರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಪ್ರದರ್ಶನ ಮತ್ತು ಮಾಹಿತಿ, ಜಯದೇವ, ಕಿದ್ವಾಯಿ, ಇಂದಿರಾ ಗಾಂಧಿ ರಾಜೀವ ಗಾಂಧಿ ಹಾಗೂ ಸಂಜಯ್ ಗಾಂಧಿ, ಐದು ಆಸ್ಪತ್ರೆಗಳ ಸಹಯೋಗದಲ್ಲಿ ವೈದ್ಯಕೀಯ ಶಿಬಿರ, ಗ್ಯಾರಂಟಿ ಯೋಜನೆಗಳ ಹಾಗೂ ಕಾರ್ಮಿಕ ಇಲಾಖೆಯ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

ಸ್ವಚ್ಛತೆಗೆ ಆದ್ಯತೆ ನೀಡಿ

ಮುಡಿಪು, ಮಿತ್ತಕೋಡಿ, ಕಂಬಳಪದವು ರಸ್ತೆ ಬದಿ ಕಸದ ರಾಶಿ ಇದೆ. ಇಲ್ಲಿ ಜಮೀನಿಗೆ ಲಕ್ಷಗಟ್ಟಲೆ ಬೆಲೆ ಇದ್ದರೂ ಮೂಲಸೌಕರ್ಯ ಇಲ್ಲದಂತಾಗಿದೆ. ಪಂಚಾಯಿತಿ ತ್ಯಾಜ್ಯ ರಸ್ತೆಬದಿ ರಾಶಿ ಹಾಕಲಾಗಿದ್ದು ಸ್ಥಳೀಯರು ರಾತ್ರಿ ನಿದ್ದೆ ಮಾಡಲೂ ಆಗದ ಪರಿಸ್ಥಿತಿ ಇದೆ. ಪೇಟೆಯಲ್ಲಿ ವಾಹನ ನಿಲುಗಡೆ ಕಷ್ಟಕರವಾಗಿದೆ. ಸ್ವಚ್ಛತೆ ಉತ್ಸವಕ್ಕೆ ಮಾತ್ರ ಸೀಮಿತ ಬೇಡ. ಒಂದು ದಿನ ಸ್ವಚ್ಛವಾದರೂ ಮರುದಿನ ಅದೇ ಪರಿಸ್ಥಿತಿ ಬರುತ್ತದೆ, ಇನ್ಫೋಸಿಸ್‌ನವರು ಅಳವಡಿಸಿದ ಬೀದಿದೀಪ ಉರಿಯದೆ ಹಲವು ಸಮಯವಾಗಿದೆ ಎಂದು ಡಾ.ರೇಖಾ ಅಸಮಾಧಾನ ವ್ಯಕ್ತಪಡಿಸಿದರು.