ಚಿನ್ಮಯ ವಿದ್ಯಾಲಯದಲ್ಲಿ ಶನಿವಾರ ಓಣಂ ಹಬ್ಬ ಆಚರಿಸಲಾಯಿತು. ಪ್ರಮುಖರಾದ ಅಭಿಜಿತ್ ಎಂ.ಕೆ., ಪೂರ್ಣಿಮಾ ಎಸ್.ಆರ್., ಸಿಂಧು ಶಶೀಂದ್ರನ್, ಶೀನಾ ಕೆ.ಪಿ. ಮೊದಲಾದವರಿದ್ದರು.
ಬದಿಯಡ್ಕ: ಓಣಂ ಕೇವಲ ಒಂದು ಹಬ್ಬವಲ್ಲ ಅದು ಮಲಯಾಳಿಗಳ ಸಂಸ್ಕೃತಿ ಮತ್ತು ಜೀವನದರ್ಶನದಲ್ಲಿ ಆಳವಾಗಿ ಬೇರೂರಿರುವ ಪ್ರೀತಿ, ಸಮಾನತೆ ಹಾಗೂ ಸಹೋದರತ್ವದ ಮಹತ್ವದ ಸಂದೇಶವಾಗಿದೆ. ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಹೇಳಿದರು.
ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಶನಿವಾರ ಓಣಂ ಆಚರಣೆಯಲ್ಲಿ ಮಾತನಾಡಿದರು. ಪ್ರಾಂಶುಪಾಲ ಟಿ.ವಿ.ಸುಕುಮಾರ, ಉಪಪ್ರಾಂಶುಪಾಲ ಅಭಿಜಿತ್ ಎಂ.ಕೆ., ಮುಖ್ಯಶಿಕ್ಷಕಿಯರಾದ ಪೂರ್ಣಿಮಾ ಎಸ್.ಆರ್. ಮತ್ತು ಸಿಂಧು ಶಶೀಂದ್ರನ್, ಶೈಕ್ಷಣಿಕ ಸಂಯೋಜಕ ಶೀನಾ ಕೆ.ಪಿ., ಸಾಹಿತ್ಯ ಸಂಘದ ಸದಸ್ಯರು ನೇತೃತ್ವ ವಹಿಸಿದ್ದರು.
ವಿದ್ಯಾರ್ಥಿಗಳ ವಿವಿಧ ಕಲಾ ಪ್ರದರ್ಶನಗಳು ಓಣಂ ಆಚರಣೆಗೆ ಮತ್ತಷ್ಟು ಮೆರುಗು ನೀಡಿದವು. ನೃತ್ಯ, ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.