ಅಮೆರಿಕದಲ್ಲಿರುವ ಪುತ್ತಿಗೆ ಮಠದ ಪದ್ಮಾವತಿ ದೇವಿಗೆ ಅಮೆರಿಕದ ಭಕ್ತೆಯೊಬ್ಬರು ನೀಡಿದ ಸ್ವರ್ಣ ಕಿರೀಟವನ್ನು ಸುಗುಣೇಂದ್ರ ಶ್ರೀಗಳು ಪ್ರದರ್ಶಿಸಿದರು. 
ಉಡುಪಿ

ಪದ್ಮಾವತಿ ದೇವಿಗೆ ಸ್ವರ್ಣ ಕಿರೀಟ ಸಮರ್ಪಣೆ

* ಪುತ್ತಿಗೆ ಸುಗುಣೇಂದ್ರ ಶ್ರೀ ಮಾಹಿತಿ

* ಅಮೆರಿಕದಲ್ಲಿರುವ ಪುತ್ತಿಗೆ ಮಠದ ಮಂದಿರ

* 2 ಕೋಟಿ ರೂ. ಮೌಲ್ಯದ ಆಭರಣ ನೀಡಿದ ಭಕ್ತೆ

ಉಡುಪಿ: ಅಮೆರಿಕದ ಅರಿಜೋನಾ ರಾಜ್ಯದ ಫೀನಿಕ್ಸ್​ ಮಹಾನಗರದಲ್ಲಿರುವ ಪುತ್ತಿಗೆ ಶ್ರೀ ವೆಂಕಟಕೃಷ್ಣ ಮಂದಿರದ ಪದ್ಮಾವತಿ ದೇವಿಗೆ ಭಕ್ತರೊಬ್ಬರು ಸುಮಾರು 2 ಕೋಟಿ ರೂ. ಮೌಲ್ಯದ ಸ್ವರ್ಣ ಕಿರೀಟ ಸಮರ್ಪಿಸಿದ್ದಾರೆ. ಅದನ್ನು ಸೆಪ್ಟೆಂಬರ್​ನಲ್ಲಿ ನಮ್ಮ ಜನ್ಮನಕ್ಷತ್ರದ ಸಂದರ್ಭದಲ್ಲಿ ದೇವಿಗೆ ಅರ್ಪಿಸಲಾಗುವುದು ಎಂದು ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿರುವ ಸುಗುಣೇಂದ್ರ ಶ್ರೀಗಳು, ಮಠದ ಭಕ್ತೆ ಅಮೆರಿಕ ನಿವಾಸಿ ಹಾಗೂ ಹೈದರಾಬಾದ್​ನ ವಿಜಯವಾಡ ಮೂಲದ ಅನಿಲಾ ಎಂಬವರು ಗುರುವಾರ ನೀಡಿದ ಸ್ವರ್ಣ ಕಿರೀಟ ಸ್ವೀಕರಿಸಿ, ವಿಶೇಷ ಪೂಜೆಯೊಂದಿಗೆ ಬಾಲಕೃಷ್ಣನಿಗೆ ತೊಡಿಸಿದರು. ಬಳಿಕ ಅದನ್ನು ಫೀನಿಕ್ಸ್​ನಲ್ಲಿರುವ ಪದ್ಮಾವತಿ ದೇವಿಗೆ ಅರ್ಪಿಸಲು ಸಂಬಂಧಿತರಿಗೆ ಹಸ್ತಾಂತರಿಸಿ ಮಾತನಾಡಿದರು.

ವಿದೇಶದ ಮೊದಲ ಮಠ

ಅಮೆರಿಕದಲ್ಲಿ ನಾವು ಸ್ಥಾಪಿಸಿರುವ 11 ದೇವಸ್ಥಾನಗಳಲ್ಲಿ ಫೀನಿಕ್ಸ್​ನಲ್ಲಿರುವುದು ಪ್ರಥಮ ಮಠವಾಗಿದೆ. ಅದನ್ನು 2000ನೇ ಇಸವಿಯಲ್ಲಿ ಸ್ಥಾಪಿಸಲಾಗಿದ್ದು, ಇಂದು ಈ ಕ್ಷೇತ್ರವು ಉತ್ತರ ಅಮೆರಿಕದಲ್ಲಿರುವ ಭಾರತೀಯರ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ. 4 ವರ್ಷದ ಹಿಂದೆ ಅಲ್ಲಿನ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸುಮಾರು 4 ಕೋಟಿ ರೂ. ಮೌಲ್ಯದ ಸ್ವರ್ಣ ಕಿರೀಟವನ್ನು ಭಕ್ತರೊಬ್ಬರು ಸಮರ್ಪಿಸಿದ್ದರು. ಶ್ರೀಮಠದ ವಿದೇಶಿ ಧಾರ್ಮಿಕ ಚಟುವಟಿಕೆಗಳ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಶ್ರೀಗಳು ತಿಳಿಸಿದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಗೋವರ್ಧನ ಕ್ಷೇತ್ರದ ವ್ಯವಸ್ಥಾಪಕ ಎ.ಪಿ. ಕುಂಜಾರ, ಸುಗುಣ ಸಂಧ್ಯಾ ಗುರುಕುಲದ ಕಾರ್ಯದರ್ಶಿ ಅಭಿಷೇಕ್​, ಶ್ರೀಧರ್​ ಭಟ್​ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.
"

ಅಮೆರಿಕದ ಫೀನಿಕ್ಸ್​ನಲ್ಲಿ ಶ್ರೀ ವೆಂಕಟಕೃಷ್ಣನ ಕ್ಷೇತ್ರಕ್ಕಾಗಿ ಈಗಾಗಲೇ ನಾಲ್ಕು ಎಕರೆ ವಿಶಾಲ ಜಾಗ ಖರೀದಿಸಲಾಗಿದೆ. ಅಲ್ಲಿನ ಪ್ರಧಾನ ಅರ್ಚಕ ಕಿರಣ್​ ಆಚಾರ್ಯ ನೇತೃತ್ವದಲ್ಲಿ ಆಗಮಶಾಸ್ತ್ರದ ನಿಯಮಾನುಸಾರ ಭವ್ಯವಾದ ಹಾಗೂ ವೈಭವೋಪೇತ ಬೃಹತ್​ ಮಂದಿರ ನಿಮಾರ್ಣ ಕಾರ್ಯ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರವು ವಿಶ್ವದ ಪ್ರಮುಖ ವೈಷ್ಣವ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಲಿದೆ.

— ಪ್ರಸನ್ನ ಆಚಾರ್ಯ. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ.