ಕೆಸರುಮಯ ರಸ್ತೆಯಲ್ಲಿ ಅಂಗವಿಕಲರನ್ನು ಕರೆದೊಯ್ಯುತ್ತಿರುವುದು.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಈ ಊರನ್ನು ಸಂಪರ್ಕಿಸಲು ಇರುವ ರಸ್ತೆಯೇ ಒಂದು ರೀತಿಯಲ್ಲಿ ಶಾಪಗ್ರಸ್ತವಾಗಿದೆ. ಒಂದೂವರೆ ದಶಕದಿಂದ ರಸ್ತೆ ಅಭಿವೃದ್ಧಿಗೆ ಒತ್ತಾಯಿಸುತ್ತಿದ್ದರೂ ಅಭಿವೃದ್ಧಿಯಾಗಿಲ್ಲ. ಮಳೆಗಾಲ ಆರಂಭಗೊಂಡರಂತೂ ಇಡೀ ಊರಿಗೆ ಸಂಪರ್ಕವೇ ಕಡಿತಗೊಳ್ಳುತ್ತದೆ. ಅದರಲ್ಲೂ 15 ದಿನಗಳಿಗೊಮ್ಮೆ ಅಂಗವಿಕಲರನ್ನು ಕರೆದುಕೊಂಡು ಹೋಗಲು ಅವರ ಮನೆಯವರು ಪಡುತ್ತಿರುವ ಪಾಡಂತೂ ಯಾರಿಗೂ ಹೇಳತೀರದಾಗಿದೆ.
ಇದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಕೊಡಪಾಡಿ ಕ್ರಾಸ್- ಸನ್ಯಾಸಿಬಲೆ ಕಡಮಾರು ಮನೆ ರಸ್ತೆಯ ಅವ್ಯವಸ್ಥೆಯ ಕಥೆ ಹಾಗೂ ಇಲ್ಲಿನ ಜನರು ಪಡುತ್ತಿರುವ ಸಂಕಷ್ಟದ ವ್ಯಥೆ. ಈ ರಸ್ತೆ ಅಭಿವೃದ್ಧಿಗಾಗಿ 2010ರಿಂದ ಗ್ರಾಮಸ್ಥರು ನಿರಂತರವಾಗಿ ಪಂಚಾಯಿತಿ ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಿದ್ದರೂ ಕೇವಲ ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಮಾತ್ರ ಸೀಮಿತವಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ.
150ಕ್ಕೂ ಮಿಕ್ಕಿ ಮನೆ
1.5 ಕಿ.ಮೀ. ಉದ್ದದ ಕೊಡಪಾಡಿ- ಸನ್ಯಾಸಿಬಲೆ ಕಡಮಾರು ಮನೆ ರಸ್ತೆಯ ಸುತ್ತಮುತ್ತ 150ಕ್ಕೂ ಹೆಚ್ಚು ಮನೆಗಳಿದ್ದು, ನೂರಾರು ಮಂದಿ ನಿತ್ಯದ ಸಂಚಾರಕ್ಕಾಗಿ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. 40ಕ್ಕೂ ಹೆಚ್ಚು ಶಾಲಾ- ಕಾಲೇಜು ವಿದ್ಯಾರ್ಥಿಗಳು ಪ್ರತಿ ದಿನ ಇದೇ ಮಾರ್ಗದಲ್ಲಿ ಸಂಚರಿಸಿ ಶಿಕ್ಷಣ ಸಂಸ್ಥೆಗಳಿಗೆ ತೆರಳಬೇಕು. 30ಕ್ಕೂ ಅಧಿಕ ವಯೋವೃದ್ಧರು ಚಿಕಿತ್ಸೆಗಾಗಿ ಕುಂದಾಪುರ ಹಾಗೂ ಮಣಿಪಾಲಕ್ಕೆ ಇದೇ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದಾರೆ. ರಸ್ತೆ ದುಸ್ಥಿತಿ ಕೇವಲ ತುರ್ತು ಸೇವೆಗಳಿಗಷ್ಟೇ ಅಲ್ಲ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗಿ ಪರಿಣಮಿಸಿದೆ. ಹದಗೆಟ್ಟ ರಸ್ತೆಯಿಂದ ಯಾವುದೇ ಶಾಲಾ ವಾಹನಗಳು ಒಳಭಾಗಕ್ಕೆ ಬರಲು ಮುಂದಾಗುತ್ತಿಲ್ಲ. ಪರಿಣಾಮ ಕುಂದಾಪುರ ಹಾಗೂ ಬೈಂದೂರು ಭಾಗದ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿ ದಿನ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಕೊಡಪಾಡಿ ಕ್ರಾಸ್‌ವರೆಗೆ ತಲುಪಿ ಅಲ್ಲಿಂದ ಬಸ್ ಅಥವಾ ಆಟೋಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದೆ.
ಅಂಗವಿಕಲರ ಚಿಕಿತ್ಸೆಗೆ ತೊಂದರೆ
ಇಲ್ಲಿನ ಕಡಮಾರು ನಿವಾಸಿ ಜನಾರ್ದನ್ ಪೂಜಾರಿ ಅವರ ಬದುಕಿಗೆ ಹದಗೆಟ್ಟ ರಸ್ತೆಯೇ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ. ಮೂರು ವರ್ಷಗಳ ಹಿಂದೆ ಸಂಭವಿಸಿದ ಲಾರಿ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿರುವ ಅವರು, ಈಗಲೂ ಚಿಕಿತ್ಸೆಗಾಗಿ ತೆರಳಬೇಕಾಗಿದೆ. ಆದರೆ ಕಡಮಾರು ಮನೆ ರಸ್ತೆಯ ದುಸ್ಥಿತಿಯಿಂದ ಅವರನ್ನು ಕರೆದೊಯ್ಯಲು ಆಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಾಗಿಸುವುದು ಅಪಾಯಕಾರಿಯಾಗಿದ್ದು, ರಸ್ತೆ ಮತ್ತಷ್ಟು ಹದಗೆಡುವ ಭೀತಿ ಇದೆ. ಅಗತ್ಯ ಚಿಕಿತ್ಸೆಗೆ ಸಂಚಾರ ಆತಂಕ ಕುಟುಂಬದವರದ್ದು.
ಸಂಚಾರ ಸಂಪೂರ್ಣ ಸ್ಥಗಿತ ಭೀತಿ
ಮಳೆಗಾಲದಲ್ಲಿ ಈ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ತಕ್ಷಣ ರಸ್ತೆಗೆ ಜಲ್ಲಿಕಲ್ಲು ಹಾಗೂ ಅಗತ್ಯ ಮಣ್ಣನ್ನು ಹಾಕಿ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಮಳೆಗಾಲ ಅವಧಿಯಲ್ಲಿ ಕನಿಷ್ಠ ವಾಹನಗಳು ಓಡಾಡುವಂತಾದರೂ ವ್ಯವಸ್ಥೆ ಮಾಡಬೇಕು. ಬಳಿಕ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಶಾಶ್ವತ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು 2010ರಿಂದಲೂ ಸ್ಥಳೀಯಾಡಳಿತಕ್ಕೆ 20ರಿಂದ 25 ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಪ್ರತಿ ಬಾರಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿ ಸಮಸ್ಯೆಯನ್ನು ಮುಂದೂಡಲಾಗುತ್ತಿದೆಯೇ ಹೊರತು ಶಾಶ್ವತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ. ಈಗ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ನಡೆಸಿ ಬಳಿಕ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು.
— ಶ್ರೀನಿವಾಸ ಪೂಜಾರಿ ಸ್ಥಳೀಯರು