ವಿದೇಶಗಳಿಂದ ಅಕ್ರಮವಾಗಿ ಆಮದಾಗುತ್ತಿರುವ ಅಡಿಕೆಗೆ ಕಡಿವಾಣ ಹಾಕುವಂತೆ ಸಚಿವ ಅಮಿತ್​ ಷಾ ಅವರಿಗೆ ಮನವಿ ಸಲ್ಲಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ, ಸತೀಶ್ಚಂದ್ರ, ಸತ್ಯನಾರಾಯಣ ಇದ್ದರು. 
ಉಡುಪಿ

ವಿದೇಶಿ ಅಡಿಕೆ ಆಮದು, ಕಳ್ಳ ಸಾಗಾಟ ತಡೆಗಟ್ಟಿ

* ಕೋಟ ಪೂಜಾರಿ ನೇತೃತ್ವದ ಸಂಸದರ ನಿಯೋಗ ಕೇಂದ್ರಕ್ಕೆ ಒತ್ತಾಯ

* ಗೃಹ ಸಚಿವ ಅಮಿತ್​ ಷಾ, ಹಣಕಾಸು ಸಚಿವೆ ನಿರ್ಮಲಾಗೆ ಮನವಿ

ಉಡುಪಿ: ಭಾರತಕ್ಕೆ ವಿದೇಶಗಳಿಂದ ಅಕ್ರಮವಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದಾಗುತ್ತಿದೆ. ವಿದೇಶಗಳಿಂದ ಆಗುತ್ತಿರುವ ಅಡಿಕೆ ಕಳ್ಳ ಸಾಗಾಟ ತಡೆಗಟ್ಟಿ ನಮ್ಮ ದೇಶದ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕು ಎಂದು ಉಡುಪಿ&ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ದೆಹಲಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಕೆನರಾ (ಉತ್ತರ ಕನ್ನಡ) ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ಅವರನ್ನು ಸಂಸತ್​ನಲ್ಲಿ ಶುಕ್ರವಾರ (ಆ.7) ಭೇಟಿಯಾಗಿ ಮನವಿ ಅರ್ಪಿಸಿದರು.

ಸಮುದ್ರದ ಮೂಲಕ ಸರಬರಾಜು

ಇಂಡೋನೇಷ್ಯಾ, ಬಾಂಗ್ಲಾದೇಶ, ಮಯನ್ಮಾರ್​ ಮುಂತಾದ ದೇಶಗಳಿಂದ ಸಮುದ್ರದ ಮೂಲಕ ಭಾರತಕ್ಕೆ ಅಕ್ರಮವಾಗಿ ಅಲ್ಲಿನ ಅಡಿಕೆ ಸರಬರಾಜಾಗುತ್ತಿದೆ. ಕೆಲವೊಮ್ಮೆ ಪಕ್ಕದ ದೇಶಗಳಿಂದ ಕಳಪೆಮಟ್ಟದ ಅಡಿಕೆ ತಂದು ದೇಸೀಯ ಉತ್ಪನ್ನಗಳೊಂದಿಗೆ ಬೆರೆಸಿ ಮಾರಾಟ ಮಾಡುತ್ತಿರುವ ವಿದ್ಯಮಾನವೂ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ದೇಶದ ಬೆಳೆಗಾರರಿಗೆ ಸಂಕಷ್ಟ
ನಮ್ಮ ದೇಶದಲ್ಲಿ ಕರ್ನಾಟಕ, ಕೇರಳ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಲ್ಲಿ ಲಕ್ಷಾಂತರ ಬೆಳೆಗಾರರು ಅಡಿಕೆ ಬೆಳೆಯುತ್ತಿದ್ದಾರೆ. ಅವರೆಲ್ಲರೂ ವಿದೇಶಿ ಅಕ್ರಮ ಅಡಿಕೆ ಆಮದಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅಕ್ರಮ ಆಮದನ್ನು ಗೃಹ ಇಲಾಖೆಯ ಮೂಲಕ ನಿಯಂತ್ರಿಸಬೇಕು ಎಂದು ಅಮಿತ್​ ಷಾ ಅವರಿಗೆ ಸಂಸದರು ಮನವರಿಕೆ ಮಾಡಿದರು.
ಸಂಸದರ ನಿಯೋಗದೊಂದಿಗೆ ಶಾಸಕ ಹಾಗೂ ರಾಜ್ಯದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಇತರರಿದ್ದರು.

ಜಿಎಸ್​ಟಿ ಶೇ.5ಕ್ಕೆ ಇಳಿಸಲು ಕೋರಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಭೇಟಿಯಾದ ಸಂಸದರು, ಅಡಿಕೆ ಬೆಳೆಗೆ ಬಳಸುವ ಕ್ರಿಮಿನಾಶಕ, ಮೈಲುತುತ್ತೆಗೆ ಪ್ರಸ್ತುತ ಶೇ.18 ಜಿಎಸ್​ಟಿ ವಿಧಿಸಲಾಗುತ್ತಿದೆ. ಅಡಿಕೆ ಬೆಳೆಯು ಕೃಷಿ ವ್ಯಾಪ್ತಿಗೆ ಬರುವುದರಿಂದ ಜಿಎಸ್​ಟಿಯನ್ನು ಶೇ.5ಕ್ಕೆ ಇಳಿಕೆ ಮಾಡಿ ಅಡಿಕೆ ಬೆಳೆಗಾರರ ಹಿತ ರಕ್ಷಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
"

ದೇಶದ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಲು ಹಾಗೂ ಬೆಳೆಗಾರರ ರಕ್ಷಣೆಗೆ ಮುಂದಾಗುವಂತೆ ಸಂಸದರ ನಿಯೋಗ ನೀಡಿದ ಮನವಿಗೆ ಗೃಹ ಸಚಿವ ಅಮಿತ್​ ಷಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸ್ಪಂದಿಸಿದ್ದು, ತ್ವರಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.