ಉಡುಪಿ ಶ್ರೀಕೃಷ್ಣನಿಗೆ ದಿನವೂ ವಿಶೇಷ ಅಲಂಕಾರ ಮಾಡುವ ಮೂಲಕ ಪುತ್ತಿಗೆ ಮಠದ ಪರ್ಯಾಯದ ಯಶಸ್ಸಿಗೆ ಸಹಕರಿಸಿದ ಕಿರಿಯ ಯತಿ ಸುಶ್ರೀಂದ್ರ ಶ್ರೀಗಳಿಗೆ ಭುವನೇಂದ್ರ ಕಿದಿಯೂರು ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಪಾಡಿಗಾರ್​ ಲಕ್ಷ್ಮೀನಾರಾಯಣ ಉಪಾಧ್ಯ, ದಿನಕರ್​, ಶೋಭಾ ದಿನಕರ್​, ವಿಲಾಸ್​, ಶರ್ವಿಲ್​, ಅವ್ಯಕ್ತ್​, ಉಚ್ಚಿಲ ಶ್ರೀಶ ಭಟ್​ ಉಪಸ್ಥಿತರಿದ್ದರು. 
ಉಡುಪಿ

ಶ್ರೀಕೃಷ್ಣನ ವಿರಾಟ್​ ಸ್ವರೂಪ ತೋರಿಸಿದ ಸುಶ್ರೀಂದ್ರ ಶ್ರೀ

* ಭುವನೇಂದ್ರ ಕಿದಿಯೂರು ಅಭಿನಂದನೆ 

* ಪುತ್ತಿಗೆ ಕಿರಿಯ ಯತಿಗೆ ಲಾರ್ಡ್ಸ್​ ಸ್ಕೂಲ್​ನಿಂದ ಸನ್ಮಾನ

ಉಡುಪಿ: ಕಳೆದ ಎರಡು ವರ್ಷ ಉಡುಪಿ ಶ್ರೀಕೃಷ್ಣನ ಪರ್ಯಾಯ ಸೇವಾ ಕೈಂಕರ್ಯ ನಡೆಸಿದ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ ಹಾಗೂ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಪೂಜಾಕಾರ್ಯ ಮರೆಯಲಾಗದು. 'ನ ಭೂತೋ ನ ಭವಿಷ್ಯತಿ' ಎಂಬಂತೆ ಗುರು-ಶಿಷ್ಯರಿಬ್ಬರೂ ಪರ್ಯಾಯಕ್ಕೇ ಸುವರ್ಣದ ಮೆರಗು ನೀಡಿದ್ದಾರೆ. ಸುಶ್ರೀಂದ್ರ ಶ್ರೀಗಳಂತೂ ದೇವರಿಗೆ ದಿನವೂ ವಿವಿಧ ಬಗೆಯ ವಿಶೇಷ ಅಲಂಕಾರ ಮಾಡುವ ಮೂಲಕ ಶ್ರೀಕೃಷ್ಣನ ವಿರಾಟ್​ ಸ್ವರೂಪವನ್ನೇ ಭಕ್ತರಿಗೆ ತೋರಿಸಿದ್ದಾರೆ ಎಂದು ಕಿದಿಯೂರು ಲಾರ್ಡ್ಸ್​ ಇಂಟರ್​ನ್ಯಾಷನಲ್​ ರೆಸಿಡೆನ್ಶಿಯಲ್​ ಸ್ಕೂಲ್​ನ ಸಂಸ್ಥಾಪಕ ಭುವನೇಂದ್ರ ಕಿದಿಯೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠಕ್ಕೆ ತೆರಳಿ ಲಾರ್ಡ್ಸ್​ ಸ್ಕೂಲ್​ ಹಾಗೂ ಕಿದಿಯೂರು ಕುಟುಂಬದ ವತಿಯಿಂದ ಸುಶ್ರೀಂದ್ರ ಶ್ರೀಗಳಿಗೆ ವಿಶೇಷ ಸನ್ಮಾನ ನೆರವೇರಿಸಿ, ಅಭಿನಂದನಾ ಪತ್ರ ನೀಡಿ ಮಾತನಾಡಿದರು.

ನಾವೂ ಕೃಷ್ಣನ ಕಂಡೆವು

ಸುಶ್ರೀಂದ್ರ ಶ್ರೀ ಮಾತನಾಡಿ, ನಮ್ಮ ಗುರುಗಳಾದ ಸುಗುಣೇಂದ್ರ ಶ್ರೀಗಳ ಚತುರ್ಥ 'ವಿಶ್ವಗೀತಾ' ಪರ್ಯಾಯ ಅದ್ದೂರಿಯಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು ಶಿಷ್ಯನಾದ ನಮಗೂ ಅತೀವ ಸಂತಸ ತಂದಿದೆ. ನಮಗೆ ಇದು ಪ್ರಥಮ ಪರ್ಯಾಯ ಆಗಿದ್ದರಿಂದ ಇನ್ನೂ ವಿಶೇಷ ಹಾಗೂ ಮಹತ್ವದ್ದಾಗಿತ್ತು. ನಿತ್ಯವೂ ಶ್ರೀಕೃಷ್ಣನನ್ನು ಪೂಜಿಸುವ ಅವಕಾಶ ಲಭಿಸಿದ್ದರಿಂದ ಸಹಜವಾಗಿ ದಿನವೂ ವಿಶೇಷ ಅಲಂಕಾರ ಮಾಡಿದೆವು. ಉಡುಪಿ ಶ್ರೀಕೃಷ್ಣ ಸುಂದರವಾಗಿರುವ ಬಾಲಕ. ಹೀಗಾಗಿ ಯಾವುದೇ ಅಲಂಕಾರ ಮಾಡಿದರೂ ಇನ್ನಷ್ಟು ಚೆಂದವಾಗಿ ಗೋಚರಿಸುತ್ತಾನೆ. ನಿತ್ಯವೂ ಅಲಂಕಾರ ಮಾಡಿ ಪೂಜಿಸಿದ್ದರಿಂದ ಶ್ರೀಕೃಷ್ಣನ ಬಗೆಬೆಗೆಯ ರೂಪವನ್ನು ನಾವೂ ಕಂಡೆವು ಎಂದು ತಿಳಿಸಿದರು.
ಶ್ರೀಗಳು ಭುವನೇಂದ್ರ ಕಿದಿಯೂರು ಹಾಗೂ ಕುಟುಂಬದ ಸದಸ್ಯರಿಗೆ ಅನುಗ್ರಹ ಲ ಮಂತ್ರಾಕ್ಷತೆ ನೀಡಿ ಹರಿಸಿದರು. ಪಾಡಿಗಾರ್​ ಲಕ್ಷ್ಮೀನಾರಾಯಣ ಉಪಾಧ್ಯ, ದಿನಕರ್​, ಶೋಭಾ ದಿನಕರ್​, ವಿಲಾಸ್​, ಶರ್ವಿಲ್​, ಅವ್ಯಕ್ತ್​, ಉಚ್ಚಿಲ ಶ್ರೀಶ ಭಟ್​ ಉಪಸ್ಥಿತರಿದ್ದರು.