ಮಾಯಿಲ್ತೋಡಿ-ಎಂಜಿರಪಳಿಕೆ-ಕನ್ಯಾರಕೋಡಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿರುವುದು. 
ಉಡುಪಿ

ಕೆಸರುಮಯ ರಸ್ತೆಯಲ್ಲಿ ಸವಾರರ ಸರ್ಕಸ್

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಎರಡು ಗ್ರಾಮಗಳು ಸಂಧಿಸುವ ಹಾಗೂ ಗಡಿ ಪ್ರದೇಶದ ರಸ್ತೆಯೊಂದು ಕಸೆರುಗದ್ದೆಯಂತಾಗಿ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷೃಕ್ಕೆ ನಾಗರಿಕರು ಪಡಿಪಾಡಲು ಪಡುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮ ಹಾಗೂ ಉರುವಾಲು ಗ್ರಾಮಗಳಿಗೆ ಸೇರಿದ ಮಾಯಿಲ್ತೋಡಿ- ಎಂಜಿರಪಳಿಕೆ-ಕನ್ಯಾರಕೋಡಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಮಳೆಗಾಲದಲ್ಲಿ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ರಸ್ತೆ ಇಡಿ ಕೆಸರುಮಯವಾಗಿದ್ದು, ಸಂಚಾರಕ್ಕೆ ತ್ರಾಸದಾಯಕವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಎದ್ದು ಬಿದ್ದು ಸಂಚರಿಸುವ ಸ್ಥಿತಿ ಉಂಟಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸುಲಭ ಸಾಧ್ಯವಾಗಿ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಬರುವ ಈ ರಸ್ತೆಯಲ್ಲಿ ವಾಹನಗಳ ಸಂಚಾರವೂ ಹೆಚ್ಚುತ್ತಿದ್ದು, ರಸ್ತೆಯ ದುಸ್ಥಿತಿಯಿಂದಾಗಿ ಸ್ಥಳೀಯರೂ, ಪರವೂರಿನವರೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಹಲವಾರು ವರ್ಷಗಳಿಗೂ ಹಿಂದೆ ಡಾಂಬರು ಕಂಡ ಈ ರಸ್ತೆಯ ಡಾಂಬರು ಕಿತ್ತು ಹೋಗಿ ಸಂಚಾರ ಸಮಸ್ಯೆ ಮೂಡಿದೆ. ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯರ ಬೇಡಿಕೆಗಳಿಗೆ ಸ್ಥಳೀಯ ಪಂಚಾಯಿತಿ ಚುನಾವಣೆಗಳಲ್ಲಿ ಅಭಿವೃದ್ಧಿಪಡಿಸುವ ಭರವಸೆ ಮಾತ್ರ ಲಭಿಸುತ್ತಿದ್ದವು. ಆದರೆ ಇಂದಿಗೂ ರಸ್ತೆ ಅಭಿವೃದ್ಧಿ ಕಾಣದೆ ಜೀರ್ಣಾವಸ್ಥೆ ತಲುಪಿದೆ.

— ಮಂಜುನಾಥ್ ಸ್ಥಳೀಯ ನಿವಾಸಿ

ಉರುವಾಲು ಗ್ರಾಮ ಮತ್ತು ಇಳಂತಿಲ ಗ್ರಾಮವನ್ನು ಬೆಸೆಯುವ ಈ ರಸ್ತೆಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಅನುದಾನ ಬೇಕಾಗಿದೆ. ಎರಡೂ ಗ್ರಾಮಗಳು ಕನಿಷ್ಠ ಆದಾಯ ಹೊಂದಿರುವುದರಿಂದ ಈ ರಸ್ತೆಗೆ ಅಗತ್ಯ ಅನುದಾನವನ್ನು ಭರಿಸಲು ಶಕ್ತವಾಗಿಲ್ಲ. ಶಾಸಕರು ಅಥವಾ ಸಂಸದರಿಂದ ಅಗತ್ಯ ಅನುದಾನ ಲಭಿಸಿದರೆ ಈ ಭಾಗದ ರಸ್ತೆಯ ಅಭಿವೃದ್ಧಿ ಸಾಧ್ಯವಾಗಬಹುದು.

— ತಿಮ್ಮಪ್ಪ ಗೌಡ ಇಳಂತಿಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ