ರಸ್ತೆಯ ಉದ್ದಕ್ಕೂ ಆಳೆತ್ತರಕ್ಕೆ ಹುಲ್ಲು ಪೊದೆಗಳು ಬೆಳೆದಿರುವುದು. 
ಉಡುಪಿ

ರಸ್ತೆಯುದ್ದಕ್ಕೂ ಹುಲ್ಲು ಪೊದೆ!

ವಾಹನ ಸಂಚಾರಕ್ಕೆ ತೊಂದರೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ನಂದಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದಿಂಜೆ ಗ್ರಾಮದ ಉರ್ಕಿದೊಟ್ಟು ಹಾಗೂ ಮುಜಲೊಟ್ಟು ದೇವಾಲಯಗಳನ್ನು ಸಂಪರ್ಕಿಸುವ ರಸ್ತೆಯ ಎರಡೂ ಬದಿಗಳಲ್ಲಿ ಹುಲ್ಲುಪೊದೆಗಳು ದಟ್ಟವಾಗಿ ಬೆಳೆದು ನಿಂತಿದ್ದು, ದಿನನಿತ್ಯದ ವಾಹನ ಸಂಚಾರ ಹಾಗೂ ಕಾಲ್ನಡಿಗೆ ಓಡಾಟಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ರಸ್ತೆಗೆ ಬಾಗಿರುವ ಹುಲ್ಲು ಪೊದೆಗಳ ನಡುವೆ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ.

ಉರ್ಕಿದೊಟ್ಟು ಹಾಗೂ ಮುಜಲೊಟ್ಟು ಧಾರ್ಮಿಕ ಕೇಂದ್ರಗಳಿಗೆ ತೆರಳುವ ನೂರಾರು ಭಕ್ತರು, ದಿನನಿತ್ಯ ಈ ವಾರ್ಗವಾಗಿ ಸಂಚರಿಸುವ ಶಾಲಾ ಮಕ್ಕಳು ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಇದುವೇ ಮುಖ್ಯ ಸಂಪರ್ಕ ರಸ್ತೆ. ಆದರೆ ಕಳೆದ ಹಲವು ತಿಂಗಳಿಂದ ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸದಿರುವುದರಿಂದ ದಾರಿ ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ಹುಲ್ಲು ಪೊದೆಯ ರಾಶಿ ರಸ್ತೆಯನ್ನು ಆವರಿಸಿದ್ದು, ರಸ್ತೆ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ವಾಣವಾಗಿದೆ.

ಮುಖಾಮುಖಿ ವಾಹನ ಬಂದರೆ ಪರದಾಟ

ಅಪಘಾತದ ಭೀತಿ ರಸ್ತೆ ಇಕ್ಕೆಲಗಳಲ್ಲಿ ಮುಳ್ಳಿನ ಪೊದೆಗಳು ರಸ್ತೆ ಮೇಲೆಯೇ ಚಾಚಿಕೊಂಡಿರುವುದರಿಂದ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಕಿರಿದಾದ ಈ ದಾರಿಯಲ್ಲಿ ಎರಡು ವಾಹನಗಳು ಮುಖಾಮುಖಿಯಾದರೆ, ಒಂದಕ್ಕೊಂದು ದಾರಿ ಬಿಟ್ಟುಕೊಡಲು ಜಾಗವಿಲ್ಲದೆ ಚಾಲಕರು ನಿಮಿಷಗಟ್ಟಲೆ ಪರದಾಡುವ ಸ್ಥಿತಿ ನಿರ್ವಾಣವಾಗಿದೆ. ತಿರುವುಗಳಲ್ಲಿ ಎದುರಿನ ವಾಹನಗಳು ದಿಢೀರನೆ ಪ್ರತ್ಯಕ್ಷವಾಗುತ್ತಿದ್ದು, ಅಪಘಾತಕ್ಕೂ ಕಾರಣವಾಗುತ್ತಿದೆ. ಕಿರಿದಾದ ಈ ರಸ್ತೆಯಲ್ಲಿ ಓಡಾಡುವುದೇ ಒಂದು ಸಾಹಸವಾಗಿದೆ.

ವಿಷಜಂತುಗಳ ಭಯ

ವಾಹನ ಸವಾರರಷ್ಟೇ ಅಲ್ಲದೆ ಕಾಲ್ನಡಿಗೆಯಲ್ಲಿ ಸಾಗುವ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳ ಸ್ಥಿತಿಯೂ ಶೋಚನೀಯವಾಗಿದೆ. ರಸ್ತೆ ಬದಿಯಲ್ಲಿ ಹೆಜ್ಜೆ ಇಡಲು ಜಾಗವಿಲ್ಲದೆ, ವಾಹನಗಳು ಬಂದಾಗ ಪೊದೆಗಳ ನಡುವೆ ಅಥವಾ ರಸ್ತೆ ಮಧ್ಯದಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ. ಪೊದೆಗಳಲ್ಲಿ ವಿಷಜಂತುಗಳ ಭಯವೂ ದಾರಿಹೋಕರನ್ನು ಕಾಡುತ್ತಿದೆ.

ಕ್ರಮ ಕೈಗೊಳ್ಳದ ಸ್ಥಳೀಯಾಡಳಿತ

ಕಳೆದ ಎರಡು ಮೂರು ತಿಂಗಳಿಂದ ಈ ರಸ್ತೆಯ ಎರಡೂ ಬದಿಗಳಲ್ಲಿ ಪೊದೆಗಳು ಆವರಿಸಿದ್ದರೂ ಸ್ಥಳೀಯಾಡಳಿತ ಇಲ್ಲಿಯವರೆಗೂ ಹುಲ್ಲು ಪೊದೆಗಳನ್ನು ತೆರವುಗೊಳಿಸುವಲ್ಲಿ ಮನಸ್ಸು ವಾಡುತ್ತಿಲ್ಲ. ಹೀಗಾಗಿ ಈ ಭಾಗದ ನೂರಾರು ಮನೆಯ ಮಂದಿ ಹುಲ್ಲು ಪೊದೆಯ ರಾಶಿಯ ನಡುವೆಯೇ ಸಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ವಾಣವಾಗಿದೆ. ಆದಷ್ಟು ಶೀಘ್ರ ರಸ್ತೆಯ ಬದಿಯ ಹುಲ್ಲು ಪೊದೆಯನ್ನು ತೆರವುಗೊಳಿಸಿ ಗ್ರಾಮದ ಜನ ನೆಮ್ಮದಿಯಿಂದ ಅತ್ತಿತ್ತ ಓಡಾಡುವಂತೆ ಸ್ಥಳೀಯಾಡಳಿತ ಕ್ರಮ ವಹಿಸುವ ಅಗತ್ಯವಿದೆ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಈ ರಸ್ತೆಯಲ್ಲಿ ದೇವಾಲಯಕ್ಕೆ ತೆರಳುವ ಭಕ್ತರು ಹಾಗೂ ಸ್ಥಳೀಯರು ಪ್ರತಿದಿನ ಅಪಾಯದ ನಡುವೆಯೇ ಸಂಚರಿಸಬೇಕಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆ ಬದಿಯ ಪೊದೆಗಳನ್ನು ಯಂತ್ರಗಳ ಮೂಲಕ ತೆರವುಗೊಳಿಸಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ವಾಡಿಕೊಡಬೇಕು.
ಸತೀಶ್ ಸ್ಥಳೀಯ ದೇವಾಲಯದ ಭಕ್ತ