ಶೈತ್ಯಾಗಾರವನ್ನು ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಲೋಕಾರ್ಪಣೆ ಮಾಡಿದರು. ಮುಳಿಯ ಜುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ಸಂಸ್ಥೆಯ ಅಧ್ಯಕ್ಷ ಮೂಲಚಂದ್ರ ಕೆ., ಸಿಇಒ ರಾಮ್‌ಪ್ರತೀಕ್ ಕರಿಯಾಳ ಮತ್ತಿತರರು ಇದ್ದರು.  
ಉಡುಪಿ

ಆತ್ಮನಿರ್ಭರ ಭಾರತಕ್ಕೆ ದಿಟ್ಟ ಹೆಜ್ಜೆ

ಇಂದಿರಾ ಎನ್ ಕೆ
ಪುತ್ತೂರು ಗ್ರಾಮಾಂತರ: ರೈತ ಭದ್ರವಾದಾಗ ದೇಶ ಸುಭದ್ರವಾಗುತ್ತದೆ. ರೈತರಿಗೆ ಶಕ್ತಿ ನೀಡಿ ಸದೃಢಗೊಳಿಸುವ ಸ್ವಾರ್ಥ ರಹಿತ ಸೇವೆಯ ಮೂಲಕ ಗ್ರಾಮಜನ್ಯ ಸಂಸ್ಥೆ ಆತ್ಮನಿರ್ಭರ ಭಾರತಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಪ್ರತಿಯೊಬ್ಬ ರೈತ ಕೈ ಜೋಡಿಸಿದರೆ ಗ್ರಾಮಜನ್ಯ ದೇಶದ ನಂಬರ್ ಒನ್ ಸಂಸ್ಥೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅಭಿಪ್ರಾಯಪಟ್ಟರು.
ಮುಂಡೂರು ಗ್ರಾಮದ ಹಿಂದಾರ್‌ನಲ್ಲಿರುವ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ನೂತನವಾಗಿ ಪ್ರಾರಂಭಿಸಿದ ಶೈತ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾನತಾಡಿದರು.

ಮುಳಿಯ ಜುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸಣ್ಣಮಟ್ಟದಲ್ಲಿ ಪ್ರಾರಂಭವಾದ ಗ್ರಾಮಜನ್ಯ ಸಂಸ್ಥೆ ಇಂದು ಅಗಾಧವಾಗಿ ಬೆಳೆದು ಕೃಷಿಗೆ ಪೂರಕ ಶಕ್ತಿ ನೀಡುತ್ತಿದೆ. ಪುತ್ತೂರು ತಾಲೂಕಿಗೆ 500ರಿಂದ 1000 ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್‌ನ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಗ್ರಾಮಜನ್ಯ ಸಂಸ್ಥೆ ಪ್ರಥಮ ಹೆಜ್ಜೆಯಿಟ್ಟಿದೆ ಎಂದರು.
ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮೂಲಚಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಶೈತ್ಯಾಗಾರದ ಪ್ರಥಮ ಗ್ರಾಹಕರಾದ ಅಭಿಜ್ಞಾನ ಫುಡ್ಸ್ ಸಂಸ್ಥೆಯ ರಾಧಾಕೃಷ್ಣ ಇಟ್ಟಿಗುಂಡಿ ಹಾಗೂ ಪಿಂಗಾರ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ರಾಮ್‌ಕಿಶೋರ್ ಮಂಚಿ ಅವರನ್ನು ಸನ್ಮಾನಿಸಲಾಯಿತು. ಕೇಶವ ಪ್ರಸಾದ್ ಮುಳಿಯ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಸ್ವಾಗತಿಸಿದರು. ಸಿಇಒ ರಾಮ್‌ಪ್ರತೀಕ್ ಕರಿಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕಿ ಯಶಸ್ವಿನಿ ಶಾಸ್ತ್ರಿ ವಂದಿಸಿದರು. ಸಂಸ್ಥೆಯ ಅಕೌಂಟೆಂಟ್ ಕೃಷ್ಣಪ್ರಸಾದ್ ನಿರೂಪಿಸಿದರು. ನಿರ್ದೇಶಕರಾದ ಶಂಕರನಾರಾಯಣ ಭಟ್ ಖಂಡಿಗೆ, ಹರ್ಷ ಕುಮಾರ್ ಎಂ.ಎಸ್., ಬಲರಾಮ ಕೆ., ಸುಬ್ರಾಯ ಬಿ.ಎಸ್., ಸಂಸ್ಥೆಯ ಸಲಹಾ ಸಮಿತಿ ಸದಸ್ಯ ಎಂ.ಜಿ. ಸತ್ಯನಾರಾಯಣ, ವಿಜ್ಞಾನಿ ಯದುಕುಮಾರ್ ಎನ್. ಉಪಸ್ಥಿತರಿದ್ದರು.

ಶೀಘ್ರವೇ ಪ್ರಧಾನಿಗೆ ಜೇನು

ಸಂಸ್ಥೆಯಲ್ಲಿ ಪ್ರಸ್ತುತ 12 ರೀತಿಯಲ್ಲಿ ಜೇನಿನ ಗುಣಮಟ್ಟ ಪರೀಕ್ಷಿಸಬಹುದಾಗಿದೆ. ಪ್ರತಿದಿನ 15 ಟನ್ ಜೇನು ಸಂಸ್ಕರಿಸುವ ಸಾಮರ್ಥ್ಯವಿದೆ. ಈಗ ಆರಂಭಿಸಿರುವ ಆಧುನಿಕ ಕೋಲ್ಡ್ ಸ್ಟೋರೇಜ್ ಕೃಷಿ, ಉದ್ಯಮ ಹಾಗೂ ಸಂಸ್ಥೆ ಬೆಳೆಯಲು ಒಂದಕ್ಕೊಂದು ಪೂರಕವಾಗಿದೆ. ಮನ್‌ಕಿ ಬಾತ್‌ನಲ್ಲಿ ಸಂಸ್ಥೆಯ ಜೇನು ಉತ್ಪನ್ನಗಳ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿಯವರಿಗೆ ಶೀಘ್ರವೇ ಸಂಸ್ಥೆಯ ಜೇನು ಉತ್ಪನ್ನಗಳನ್ನು ತಲುಪಿಸಲಾಗುವುದು ಎಂದು ಸಿಎಒ ರಾಮ್‌ಪ್ರತೀಕ್ ಕರಿಯಾಳ ತಿಳಿಸಿದರು.