ಎಣ್ಮಕಜೆ ಪಂಚಾಯಿತಿಯ ಸೇರಾಜೆಯ ಜನರು ಹೊಳೆ ದಾಟಲು ಇಂದಿಗೂ ದೋಣಿಯನ್ನೇ ಆಶ್ರಯಿಸಿರುವುದು.
ಪುರುಷೋತ್ತಮ ಪೆರ್ಲ ಕಾಸರಗೋಡು
ಕೇರಳದ ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯಿತಿಯ ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿರುವ ಸೇರಾಜೆಯ ಜನತೆಗೂ ದೋಣಿಗೂ ಸುದೀರ್ಘ ನಂಟು ಬೆಳೆದಿದೆ. ಇಂದಿಗೂ ಆ ದೋಣಿ ನಂಟು ಕಡಿದುಕೊಂಡಿಲ್ಲ. ಸೀರೆಹೊಳೆಯನ್ನು ದಾಟಲು ಸೇರಾಜೆ, ಕಾಮಜಾಲು, ಬಾಳೆಕಲ್ಲು ಜನತೆಗೆ ಈ ಪುಟ್ಟ ದೋಣಿ ಬಿಟ್ಟರೆ ಬೇರೆ ‘ಮಾರ್ಗ’ವಿಲ್ಲ.
ಕೇರಳ ಮತ್ತು ಕರ್ನಾಟಕದ ಗಡಿಯಾಗಿ ಗುರುತಿಸಲ್ಪಟ್ಟಿರುವ ಸೇರಾಜೆಯ ಸೀರೆಹೊಳೆಯನ್ನು ಅಡ್ಡದಾಟಿ ಸಂಚರಿಸಬೇಕಾದರೆ, ಕಿರು ದೋಣಿಯೇ ಇವರಿಗಿರುವ ಏಕೈಕ ಆಸರೆ. ಸೇರಾಜೆ ಹೊಳೆಯ ಎರಡೂ ಪಾರ್ಶ್ವದಲ್ಲಿರುವ ಕುಟುಂಬಗಳಿಗೆ ತಮ್ಮ ಸಂಬಂಧಿಕರು ಅಥವಾ ಜಮೀನಿಗೆ ಹೋಗಿ ಬರಬೇಕಾದರೆ ಹೊಳೆ ದಾಟಲೇ ಬೇಕು.
ಸೇರಾಜೆ ಜನತೆಗೆ ಬಾಳೆಕಲ್ಲು, ಕಾಮಜಾಲು, ಕುಕ್ಕಾಜೆ, ಮಾಣಿಲ, ತಾರಿದಳ ಸಂಚರಿಸಬೇಕಾದರೆ ಹೊಳೆದಾಟಿ ತೆರಳಬೇಕು. ಇದೇ ಕಾರಣಕ್ಕಾಗಿ ಇಲ್ಲಿನ ಜನತೆಗೆ ಸಣ್ಣ ದೋಣಿ ಬಲು ದೊಡ್ಡ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದೆ. ಹೊಳೆಯ ಒಂದು ಪಾರ್ಶ್ವದಲ್ಲಿ ಎಣ್ಮಕಜೆ ಹಾಗೂ ಪುತ್ತಿಗೆ ಪಂಚಾಯಿತಿಗೆ ಸಂಪರ್ಕ ಕಲ್ಪಿಸುತ್ತಿದ್ದರೆ, ಅತ್ತ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ ಪಂಚಾಯಿತಿಗೆ ಸಂಪರ್ಕ ಕಲ್ಪಿಸುತ್ತದೆ.
ತೂಗುಸೇತುವೆಗೆ ಆಗ್ರಹ: ಸೇರಾಜೆಯಲ್ಲಿ ತೂಗುಸೇತುವೆಯೊಂದನ್ನು ನಿರ್ಮಿಸುವಂತೆ ಇಲ್ಲಿನ ಜನತೆ ಸಂಬಂಧಪಟ್ಟವರನ್ನು ಆಗ್ರಹಿಸುತ್ತಾ ಬಂದಿದ್ದಾರೆ. ನೂರು ಮೀಟರ್‌ಗೂ ಕಡಿಮೆ ಅಗಲ ಹೊಂದಿರುವ ಇಲ್ಲಿನ ಹೊಳೆಗೆ ತೂಗು ಸೇತುವೆ ನಿರ್ಮಿಸುವುದು ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗದು ಎಂಬುದು ಇಲ್ಲಿನ ಜನತೆಯ ಅಭಿಪ್ರಾಯ.
7 ದಶಕಗಳ ನಂಟು
ಇಲ್ಲಿನ ದೋಣಿಗೆ ಏಳೆಂಟು ದಶಕಕ್ಕೂ ಹೆಚ್ಚಿನ ಇತಿಹಾಸವಿದೆ. ಹಿರಿಯ ಬಿಲ್ಲವ ಮುಖಂಡ, ಕಮ್ಯುನಿಸ್ಟ್ ನೇತಾರ ಸೇರಾಜೆ ಮದನ ಮಾಸ್ಟರ್ ಅವರ ಪ್ರಯತ್ನದ ಫಲವಾಗಿ ದೋಣಿ ಯಾನ ಆರಂಭಗೊಂಡಿತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರು ಮಳೆಗಾಲದಲ್ಲಿ ದೋಣಿಯಲ್ಲಿ ಸಂಚರಿಸುವುದು ತೀರಾ ಅಪಾಯಾಕಾರಿ. ಆದರೆ ಅವರಿಗದು ಅನಿವಾರ್ಯವಾಗಿದೆ. ದೋಣಿ ನಡೆಸುವವರ ಚಾಕಚಕ್ಯತೆ ಇಲ್ಲಿ ಬಲು ಮುಖ್ಯ. ಕಳೆದ ಹಲವು ವರ್ಷಗಳಿಂದ ಇಲ್ಲಿನ ನಿವಾಸಿ ದೂಮ ಪೂಜಾರಿ ದೋಣಿ ನಡೆಸುತ್ತಿದ್ದಾರೆ. ನೀರಿನ ಸೆಳೆತ ಇರುವಾಗ ತುಂಬಾ ಜಾಗರೂಕತೆಯಿಂದ ದೋಣಿಯನ್ನು ಮುನ್ನಡೆಸಿ ಹೋಗಬೇಕಾಗುತ್ತದೆ ಎನ್ನುತ್ತಾರೆ 72ರ ಹರೆಯದ ದೂಮ ಪೂಜಾರಿ.
ಬೇರೆ ಕಡೆ ಸೇತುವೆಯಿಂದ ಪ್ರಯೋಜನವಿಲ್ಲ
ಸೀರೆಹೊಳೆಗೆ ಬಾಕಿಲಪದವು ಹಾಗೂ ಪೂವನಡ್ಕದಲ್ಲಿ ಸೇತುವೆ ನಿರ್ಮಾಣಕ್ಕೆ ಕೇರಳ ಹಾಗೂ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಸೇರಾಜೆ ಜನರಿಗೆ ಇವೆರಡೂ ಸೇತುವೆಗಳಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಮಳೆಗಾಲದಲ್ಲಿ ತಮ್ಮ ಕೃಷಿ ಭೂಮಿಗೆ ತೆರಳಲು, ಸಂಬಂಧಿಕರ ಮನೆಗೆ ತೆರಳಬೇಕಾದರೆ ಸೀರೆಹೊಳೆಯನ್ನೇ ದಾಟಬೇಕು. ಬೇಸಿಗೆಯಲ್ಲಿ ಸ್ಥಳೀಯ ಕೃಷಿಕರು ಸಾವಿರಾರು ರೂ. ಖರ್ಚು ಮಾಡಿ ಕೃಷಿ ಅಗತ್ಯಕ್ಕಾಗಿ ಹೊಳೆಗೆ ತಾತ್ಕಾಲಿಕ ಕಟ್ಟವನ್ನು ನಿರ್ಮಿಸಿಕೊಳ್ಳುತ್ತಾರೆ. ಇದರಿಂದ ಏಪ್ರಿಲ್-ಮೇ ತಿಂಗಳವರೆಗೂ ಹೊಳೆಯಲ್ಲಿ ನೀರು ಸಂಗ್ರಹಗೊಂಡು ಕೃಷಿಗೆ ಆಸರೆಯಾಗುತ್ತದೆ. ಸೀರೆಹೊಳೆಗೇ ತೂಗುಸೇತುವೆ ನಿರ್ಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಸೇರಾಜೆ ಹೊಳೆ ದಡದ ಜನರು ದೀರ್ಘಕಾಲದಿಂದ ಹೊಳೆ ದಾಟಲು ಈ ಸಣ್ಣ ದೋಣಿಯನ್ನು ಬಳಸುತ್ತಾ ಬಂದಿದ್ದಾರೆ. ಆಧುನಿಕ ಯುಗದಲ್ಲೂ ಇಲ್ಲಿನ ಜನತೆಗೆ ದೋಣಿ ಪ್ರಯಾಣದಿಂದ ಮುಕ್ತಿ ಲಭಿಸದಿರುವುದು ವಿಪರ್ಯಾಸ. ಇಲ್ಲಿನ ಜನತೆಯ ಅಪಾಯಕಾರಿ ದೋಣಿ ಸಂಚಾರದ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ತೂಗುಸೇತುವೆ ನಿರ್ಮಿಸಿಕೊಡಲು ಮುಂದಾಗಬೇಕು.
— ಹರೀಶ್ ಸೇರಾಜೆ, ಸ್ಥಳೀಯ ನಿವಾಸಿ