(ಸಾಂದರ್ಭಿಕ ಚಿತ್ರ). 
ಉಡುಪಿ

ಜಿಲ್ಲೆಯಲ್ಲಿ ಶೇ.93.55 ಡಿಜಿಟಲೀಕರಣ ಪೂರ್ಣ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಮಾಹಿತಿ

* ಮುಂದುವರಿದ ಎಸ್​ಐಆರ್​ ಪ್ರಕ್ರಿಯೆ

ಉಡುಪಿ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದೆ. ಮತದಾರರು ಹಿಂದಿರುಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯವೂ ನಡೆದಿದ್ದು, ಈವರೆಗೆ ಒಟ್ಟು ಮತದಾರರ ಪೈಕಿ ಶೇ.93.55 ಮಂದಿಯ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 10,63,876 ಮತದಾರರಿಗೆ ಬಿಎಲ್​ಒಗಳು ಎನ್ಯುಮರೇಷನ್​ ಫಾರ್ಮ್ ತಲುಪಿಸಿದ್ದು, ಇವರಲ್ಲಿ 9,95,317 ಮಂದಿಯ ಡಿಜಿಟಲೀಕರಣ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಈವರೆಗೆ 20,582 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 27,135 ಮಂದಿ ಮತದಾರರು ಕಾಯಂ ಆಗಿ ಬೇರೆಡೆ ವರ್ಗಾವಣೆಗೊಂಡಿದ್ದಾರೆ. ಅಲ್ಲದೆ, ಈವರೆಗೆ 7,999 ಮಂದಿ ಮತದಾರರು ಆನ್​ಲೈನ್​ ಮೂಲಕವೂ ನೋಂದಣಿ ಮಾಡಿದ್ದಾರೆ.

733 ಮತಗಟ್ಟೆಗಳಲ್ಲಿ ಶೇ.100 ಸಾಧನೆ

ಉಡುಪಿ ಜಿಲ್ಲೆಯಲ್ಲಿ 733 ಮತಗಟ್ಟೆ ವ್ಯಾಪ್ತಿಯಲ್ಲಿ ಶೇ.100 ಡಿಜಿಟಲೀಕರಣ ಕಾರ್ಯ ನಡೆದಿದೆ. ಎಎಸ್​ಡಿಡಿ (ಗೈರು, ವರ್ಗಾವಣೆ, ಮೃತ, ತೆಗೆದುಹಾಕಿದ), ಡಿಎಸ್​ಇ ಹಾಗೂ ಪಿಎಸ್​ಇ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಬೈಂದೂರು ಕ್ಷೇತ್ರ-142 ಮತಗಟ್ಟೆ, ಕುಂದಾಪುರ-158, ಉಡುಪಿ- 74, ಕಾಪು- 151, ಕಾರ್ಕಳ- 208 ಮತಗಟ್ಟೆಯಲ್ಲಿ ಶೇ. 100 ಸಾಧನೆಯಾಗಿದೆ ಎಂದು ಡಿಸಿ ಸ್ವರೂಪಾ ಮಾಹಿತಿ ನೀಡಿದ್ದಾರೆ.
"

ಜಿಲ್ಲೆಯಲ್ಲಿ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಶೇ.100 ಪೂರ್ಣಗೊಂಡಿದ್ದರೂ ಅಗತ್ಯವಿದ್ದಲ್ಲಿ ನಿರ್ದಿಷ್ಟ ಬದಲಾವಣೆ ಮಾಡಲೂ ಅವಕಾಶವಿದೆ. ಅಂತಹ ಮತಗಟ್ಟೆಗಳ ಪಟ್ಟಿ ಪರಿಶೀಲಿಸಿ ಯಾವುದೇ ಹೊಸ ಸೇರ್ಪಡೆ ಅಥವಾ ಬದಲಾವಣೆಗಳಿದ್ದಲ್ಲಿ ಸಂಬಂಧಪಟ್ಟ ಬೂತ್​ ಮಟ್ಟದ ಅಧಿಕಾರಿ (ಬಿಎಲ್​ಒ)ಗಳಿಗೆ ಹಾಗೂ ಮತದಾರರ ನೋಂದಣಾಧಿಕಾರಿ (ಇಆರ್​ಒ)ಗಳ ಗಮನಕ್ಕೆ ತರಬಹುದಾಗಿದೆ.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.