ಮಣಿಪಾಲದಲ್ಲಿ ಆಯೋಜಿಸಿದ್ದ 'ಮಣಿಪಾಲ್ ಮ್ಯಾರಥಾನ್'ಗೆ ಡಾ. ಎಚ್.ಎಸ್. ಬಲ್ಲಾಳ್ ಇತರರು ಚಾಲನೆ ನೀಡಿದರು.
* ಡಾ. ಎಚ್.ಎಸ್. ಬಲ್ಲಾಳ್ ಅಭಿಮತ
* 8ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್
ಉಡುಪಿ: ಶಿಕ್ಷಣದ ಜತೆಗೆ ಸಮಗ್ರ ಅಭಿವೃದ್ಧಿ ಉತ್ತೇಜಿಸುವುದು ಮಾಹೆಯ ದೃಷ್ಟಿಕೋನವಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಓಟಗಾರರು ಪಾಲ್ಗೊಂಡಿರುವ ಈ ಮಣಿಪಾಲ್ ಮ್ಯಾರಥಾನ್ ಕ್ಕೆ ಸಾಕ್ಷಿಯಾಗಿದೆ. ನಾವು ಕೇವಲ ದೈಹಿಕ ದೃಢತೆ ಮತ್ತು ಆರೋಗ್ಯವನ್ನಷ್ಟೇ ಉತ್ತೇಜಿಸುತ್ತಿಲ್ಲ. ಸುಸ್ಥಿರ&ಹಸಿರು ಭವಿಷ್ಯಕ್ಕಾಗಿ ಬದ್ಧತೆಯ ಹೆಜ್ಜೆ-ಓಟ ಇದಾಗಿದೆ. ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಒಳಿತಿಗಾಗಿ ನಮ್ಮ ಬದ್ಧತೆಯನ್ನು ಪಾಲಿಸುತ್ತಿದ್ದೇವೆ ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವತಿಯಿಂದ ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಭಾನುವಾರ (ಫೆ.8) ಬೆಳಗ್ಗೆ ಆಯೋಜಿಸಿದ್ದ 8ನೇ ಆವೃತ್ತಿಯ "ಮಣಿಪಾಲ ಮ್ಯಾರಥಾನ್'ಗೆ ಚಾಲನೆ ನೀಡಿ ಮಾತನಾಡಿದರು.
25 ಲಕ್ಷ ರೂ. ಬಹುಮಾನ
ಭಾರತದಲ್ಲಿಯೇ ವಿದ್ಯಾರ್ಥಿ ಆಯೋಜಿತ ಅತಿದೊಡ್ಡ ಕಾರ್ಯಕ್ರಮವಾಗಿ ಗುರುತಿಸಿಕೊಂಡ ಮಣಿಪಾಲ್ ಮ್ಯಾರಥಾನ್ನಲ್ಲಿ 20 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 25 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ನಗದು ಬಹುಮಾನ ನೀಡಲಾಯಿತು. ದುಬೈ, ಇಂಗ್ಲಂಡ್, ಇಥಿಯೋಪಿಯ, ಜರ್ಮನಿ, ಕೀನ್ಯಾ, ಜಪಾನ್, ಮಲೇಷಿಯಾ, ನೇಪಾಳ, ಶ್ರೀಲಂಕಾ ಮತ್ತು ಅಮೆರಿಕ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಈ ಬಾರಿ 42 ಕಿಮೀ ಪೂರ್ಣ ಮ್ಯಾರಥಾನ್ ನಿಮಿತ್ತ ಕಡಲತೀರದಲ್ಲಿ ಓಡಲು ಅವಕಾಶ ಕಲ್ಪಿಸಲಾಗಿತ್ತು. ಓಟದ ಬಳಿಕ ಸಂಭ್ರಮದ ಕಾರ್ನಿವಲ್ ಆಚರಿಸಲಾಯಿತು. ಸಂಗೀತ, ಸಾಂಸತಿಕ ಪ್ರದರ್ಶನ ಹಾಗೂ ಸಂವಾದಾತ್ಮಕ ಫಿಟ್ನೆಸ್ ಮತ್ತು ಜುಂಬಾ ಸೆಷನ್ಗಳು ಮ್ಯಾರಥಾನ್ನ ಸಡಗರ ಹೆಚ್ಚಿಸಿದವು.
ಮಾಹೆಯ ಕುಲಪತಿ ಡಾ. ಎಂ.ಡಿ. ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಶರತ್ ರಾವ್, ಮಂಗಳೂರು ಕ್ಯಾಂಪಸ್ನ ಸಹ ಕುಲಪತಿ ಡಾ. ದಿಲೀಪ್ ನಾಯ್ಕ್, ಸಿಇಒ ಡಾ. ಆನಂದ್ ವೇಣುಗೋಪಾಲ್, ಸಿಕ್ಕಿಂ ಮಣಿಪಾಲ್ ವಿವಿ ಕುಲಪತಿ ಡಾ. ಗೋಪಾಲಕೃಷ್ಣ ಪ್ರಭು, ಮಾಹೆಯ ಇತರ ಹಿರಿಯ ಅಧಿಕಾರಿಗಳು, ಶಾಸಕರಾದ ಯಶ್ಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಓಟದಲ್ಲಿ ವಿಜೇತರಾದವರು
* 42 ಕಿಮೀ ಪುರುಷ: ಸತೀಶ್ ಕುಮಾರ್ (ಪ್ರ), ಸಚಿನ್ ಪೂಜಾರಿ (ದ್ವಿ), ಡೆಸಿ ಎಂಡಲೂ (ತೃ).
* 42 ಕಿಮೀ ಮಹಿಳಾ: ಸೆನೆಟ್ ಕೆಫಲ್ಗಾಂ ಲೆಶರ್ಜ್ (ಪ್ರ), ಯೆನಾಲಿಮ್ ಅಯನೊ ಬುಲಿ (ದ್ವಿ), ನೀತಿ ಕೃಪಾಲನಿ (ತೃ).
* 21 ಕಿಮೀ ಪುರುಷ: ರಿಜ್ವನ್ ಅಲಿ (ಪ್ರ), ಶಾಶ್ವತ್ ರಾಜೇಶ್ ಪೂಜಾರಿ (ದ್ವಿ), ನಳಿನಾಕ್ಷನ್ ಕಿಝಕೆದತ್ (ತೃ).
* 21 ಕಿಮೀ ಮಹಿಳಾ: ಭಾವನಾ ನೇಗಿ (ಪ್ರ), ನಂದಿನಿ ಜಿ.(ದ್ವಿ), ಋತುಜಾ ಪಾಟೀಲ್ (ತೃ).
* 10 ಕಿಮೀ ಪುರುಷ: ಶಿವಾನಂದ ಚಿಗರಿ (ಪ್ರ), ಶ್ರೀಧರ ಎಸ್.ಎನ್. (ದ್ವಿ), ಮುಬಾರಕ್ ಆರ್. ದಂತಲಿ (ತೃ).
* 10 ಕಿಮೀ ಮಹಿಳಾ: ಶಾಹಿನ್ ಎಸ್. ಧಾರವಾಡ (ಪ್ರ), ಶ್ರೇಯಾ ಮೂಡೆಕಲ್ಲು (ದ್ವಿ), ಚೈತ್ರಾ ಟಿ.ಪಿ. (ತೃ).
* 5 ಕಿಮೀ ಯುವಕ: ನಾಗರಾಜ್ ದಿವಟೆ (ಪ್ರ), ರಂಗ (ದ್ವಿ), ಮಂಜುನಾಥ ಬೇಲೂರಪ್ಪನವರ್ (ತೃ).
* 5 ಕಿಮೀ ಯುವತಿ: ನಾಗಿಣಿ (ಪ್ರ), ಎಚ್.ವಿ. ದೀಕ್ಷಾ (ದ್ವಿ), ರೇಖಾ ಬಿ.ಪಿ. ಬಸಪ್ಪ ಫಿರೋಜಿ (ತೃ).