ಆರ್ಯಾಪು ಗ್ರಾಪಂ ಸಭಾಂಗಣದಲ್ಲಿ ಪುತ್ತೂರು ಹೋಬಳಿಮಟ್ಟದ ಪ್ರಜಾಸೇವೆ ಆಂದೋಲನವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಎಸ್.ಬಿ.ಕೂಡಲಗಿ, ನವೀನ್ ಕುಮಾರ್ ಭಂಡಾರಿ, ಉಮಾನಾಥ ಶೆಟ್ಟಿ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಗ್ರಾಮಾಂತರ : ರಾಜ್ಯದಲ್ಲಿ ಸರ್ಕಾರವೇ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡುತ್ತಿದೆ. ಇದಕ್ಕಾಗಿಯೇ ಪ್ರಜಾಸೇವೆ ಆರಂಭಿಸಲಾಗಿದೆ. ಪ್ರಜಾಸೇವೆಯಲ್ಲಿ ಎಲ್ಲ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿ ಗ್ರಾಮೀಣ ಜನರ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಿ, ಶೇ.80ರಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಪರಿಹಾರವಾಗದಿರುವ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.
ಆರ್ಯಾಪು ಗ್ರಾಪಂ ಸಭಾಂಗಣದಲ್ಲಿ ಶನಿವಾರ ಪುತ್ತೂರು ಹೋಬಳಿಮಟ್ಟದ ಪ್ರಜಾಸೇವೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು.
ಬಡವರು ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗೆ ಬಂದಾಗ ಅಧಿಕಾರಿಗಳು ಸ್ಪಂದನೆ ನೀಡಬೇಕು. ಜನರ ಸೇವೆಯಲ್ಲಿ ಅಧಿಕಾರಿಗಳು ನಮ್ಮ ಜತೆಗೆ ಸಹಕಾರ ನೀಡಬೇಕು. ಮೇಲಧಿಕಾರಿಗಳು ಕೆಳಗಿನ ಹಂತದ ಅಧಿಕಾರಿಗಳ ಮೇಲೆ ದರ್ಪ ತೋರಿಸಬಾರರದು ಎಂದರು.
ತಹಸೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ, ಆಂದೋಲನದಲ್ಲಿ ತಾಲೂಕುಮಟ್ಟದಲ್ಲಿ ಪರಿಹರಿಸುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಜಿಲ್ಲೆ, ರಾಜ್ಯಮಟ್ಟದಲ್ಲಿ ಪರಿಹರಿಸುವ ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲಗಾವುದು ಎಂದರು.
ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ತಾಪಂ ಇಒ ನವೀನ್ ಕುಮಾರ್ ಭಂಡಾರಿ, ಆರ್ಯಾಪು ಗ್ರಾಪಂ ಆಡಳಿತಾಧಿಕಾರಿಯಾಗಿರುವ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಉಪಸ್ಥಿತರಿದ್ದರು. ಗ್ರಾಪಂ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ನಿರೂಪಿಸಿರು.
7 ಅಹವಾಲುಗಳ ಸ್ವೀಕಾರ
ಆಂದೋಲನದಲ್ಲಿ ಸಾರ್ವಜನಿಕರಿಂದ ಒಟ್ಟು 7 ಅಹವಾಲುಗಳನ್ನು ಸ್ವೀಕರಿಸಲಾಯಿತು. ಮುಂಡೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ಅನುದಾನ ಬಿಡುಗಡೆ, ಹಿರೇಬಂಡಾಡಿಯಲ್ಲಿ ರಸ್ತೆ ಕಾಂಕ್ರೀಟೀಕರಣ, ಕುರಿಯದಲ್ಲಿ ಪ್ಲಾಟಿಂಗ್, ಗೃಹಲಕ್ಷ್ಮಿ ಮೊತ್ತ ಪಾವತಿಯಾಗದಿರುವುದು, ಆರ್ಯಾಪುವಿನಲ್ಲಿ ರಸ್ತೆ ಕಾಂಕ್ರೀಟೀಕರಣ ಮತ್ತು ತಡೆಗೋಡೆ, ಆರ್ಯಾಪು ಗ್ರಾಪಂಗೆ ಕಾಯಂ ಪಿಡಿಒ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವಂತೆ ಅಹವಾಲುಗಳು ಸಲ್ಲಿಕೆಯಾಗಿವೆ.