ಉಡುಪಿಯಲ್ಲಿ ಯಕ್ಷಗಾನ ಹಿರಿಯ ಕಲಾವಿದ ದಯಾನಂದ್​ ಬಳೆಗಾರ ನಾಗೂರು ಅವರಿಗೆ 'ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಬಿ. ಜಯಕರ್​ ಶೆಟ್ಟಿ ಇಂದ್ರಾಳಿ, ಬನ್ನಂಜೆ ಬಾಬು ಅಮೀನ್​, ರಂಜನ್​, ಪ್ರೊ. ಉದಯಕುಮಾರ್​ ಶೆಟ್ಟಿ, ಕೇಶವಮೂರ್ತಿ ಬಿ., ಗಣೇಶ್​ ಕೋಟ್ಯಾನ್​, ನಿಟ್ಟೂರು ಮಹಾಬಲ ಶೆಟ್ಟಿ ಇದ್ದರು. 
ಉಡುಪಿ

ಯಕ್ಷಗಾನಕ್ಕೆ 'ಕಲಾಕ್ಷೇತ್ರ'ದ ಕೊಡುಗೆ ಅಪಾರ

* ಬಿ. ಜಯಕರ್​ ಶೆಟ್ಟಿ ಇಂದ್ರಾಳಿ ಮೆಚ್ಚುಗೆ

* ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ

ಉಡುಪಿ: ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ಅಭಿವೃದ್ಧಿಗೆ 'ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ'ದ ಕೊಡುಗೆ ಅಪಾರವಾಗಿದೆ. ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಅಮೃತ ಮಹೋತ್ಸವ ಕಂಡ ಏಕೈಕ ಹವ್ಯಾಸಿ ಸಂಘವೂ ಇದಾಗಿದೆ. ನೂರಾರು ಕಲಾವಿದರನ್ನು ಕಲಾಸೇವೆಗೆ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಕಲಾಕ್ಷೇತ್ರದ ಪಾತ್ರ ಹಿರಿದಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಗುಂಡಿಬೈಲಿನಲ್ಲಿರುವ ತಲ್ಲೂರು ಗಾರ್ಡನ್​ನಲ್ಲಿ ಆಯೋಜಿಸಿದ್ದ 'ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ'ದ 75ನೇ ವಾರ್ಷಿಕೋತ್ಸವ, ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಮೃತ ಮಹೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್​ ಮಾತನಾಡಿ, ಸಂಘ ಸ್ಥಾಪಕರಿಂದ ಆರಂಭಿಸಿ ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಹಾಗೂ ಗತಿಸಿದ ನೂರಾರು ಜನರ ಕೊಡುಗೆ ಸ್ಮರಿಸಿದರು.
ಉಡುಪಿ ಇಂಜಿನಿಯರ್ಸ್​ ಅಸೋಸಿಯೇಷನ್​ನ ಅಧ್ಯಕ್ಷ ರಂಜನ್​, ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿದರು. ಉಡುಪಿ ಶಾಸಕ ಯಶಪಾಲ್​ ಸುವರ್ಣ ಅವರು ಮಕ್ಕಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಸಂಸ್ಥೆಗೆ ಶುಭ ಹಾರೈಸಿದರು. ಅಮೃತ ಮಹೋತ್ಸವದ ಕಾರ್ಯ ಯೋಜನೆಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ಯಕ್ಷಗಾನ ಹಿರಿಯ ಕಲಾವಿದ, ಖ್ಯಾತ ಸ್ತ್ರೀ ವೇಷಧಾರಿ ದಯಾನಂದ್​ ಬಳೆಗಾರ ನಾಗೂರು ಅವರಿಗೆ 'ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಯಕ್ಷಗಾನ ವಿಮರ್ಶಕ ಪ್ರೊ. ಉದಯಕುಮಾರ್​ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು, ಸಂಘದ ಅಧ್ಯಕ್ಷ ಕೇಶವಮೂರ್ತಿ ಬಿ. ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್​ ಕೋಟ್ಯಾನ್​ ವರದಿ ವಾಚಿಸಿದರು. ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ವಂದಿಸಿದರು.
ಸಭಾ ಕಯಾಕ್ರಮದ ಬಳಿಕ ಸಂಘದ ವಿದ್ಯಾರ್ಥಿಗಳು 'ಮಾಯಾಪುರಿ ಮಹಾತ್ಮೆ' ಹಾಗೂ 'ವೀರಮಣಿ ಕಾಳಗ' ಯಕ್ಷಗಾನ ಪ್ರದರ್ಶಿಸಿದರು.