ಬೆಳ್ತಂಗಡಿ ತಾಲೂಕಿನ ಪಶು ಆಸ್ಪತ್ರೆಗಳು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ಕೊರತೆಯಿಂದ ನಲುಗುತ್ತಿದ್ದು, ಇದರ ನೇರ ಪರಿಣಾಮ ಸಾವಿರಾರು ಹೈನುಗಾರರು ಹಾಗೂ ಜಾನುವಾರುಗಳ ಚಿಕಿತ್ಸಾ ಸೇವೆ ಮೇಲೆ ಬೀಳುತ್ತಿದೆ. ಜಿಲ್ಲೆಯ ಕಚೇರಿಗಳು, ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರು ಹಾಗೂ ವಿವಿಧ ಹಂತದ ಸಿಬ್ಬಂದಿ ಕೊರತೆಯಿಂದ ಸೇವೆಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ಒಟ್ಟು 449 ಹುದ್ದೆಗಳು ಮಂಜೂರಾಗಿದ್ದು, ಕೇವಲ 73 ಹುದ್ದೆ ಮಾತ್ರ ಭರ್ತಿಯಾಗಿ ಬರೋಬ್ಬರಿ 377 ಹುದ್ದೆಗಳು ಖಾಲಿ ವಿದೆ. ಶೇ.83ಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ಇಲಾಖೆ ಕಾರ್ಯನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇರುವ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದ್ದು, ಅವರು ಕೆಲಸದ ಒತ್ತಡದಿಂದ ಹೈರಾಣಾಗುತ್ತಿದ್ದಾರೆ.
ಎಷ್ಟೆಷ್ಟು ಹುದ್ದೆಗಳು ಖಾಲಿ: ಮುಖ್ಯ ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ 6ರಲ್ಲಿ 3 ಖಾಲಿ ಇದ್ದರೆ, 33 ಮುಖ್ಯ ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ 22 ಖಾಲಿ ಇವೆ. ಪಶುವೈದ್ಯಾಧಿಕಾರಿಗಳ 19 ಹುದ್ದೆಗಳ ಪೈಕಿ ಎಲ್ಲವೂ ಖಾಲಿ ಇರುವುದು ಆತಂಕಕಾರಿ ಸಂಗತಿ. ಜಾನುವಾರು ಅಭಿವೃದ್ಧಿ ಅಧಿಕಾರಿಗಳ 6 ಹುದ್ದೆಗಳಲ್ಲಿ 5, ಜಾನುವಾರು ಅಧಿಕಾರಿಗಳ 17ರಲ್ಲಿ 8 ಹಾಗೂ ಹಿರಿಯ ಪಶು ವೈದ್ಯಕೀಯ ಪರೀಕ್ಷಕರ 61 ಹುದ್ದೆಗಳಲ್ಲಿ 53 ಹುದ್ದೆಗಳು ಖಾಲಿ ಇವೆ.
ಪಶು ವೈದ್ಯಕೀಯ ಪರೀಕ್ಷಕರ 30 ಹುದ್ದೆಗಳಲ್ಲಿ 23 ಹಾಗೂ ಕಿರಿಯ ಪಶು ವೈದ್ಯಕೀಯ ಪರೀಕ್ಷಕರ 70 ಹುದ್ದೆಗಳಲ್ಲಿ 64 ಹುದ್ದೆಗಳು ಖಾಲಿಯಾಗಿವೆ. ಇದಲ್ಲದೆ, ಎಕ್ಸ್‌ರೇ ಮತ್ತು ಲ್ಯಾಬ್ ಸಿಬ್ಬಂದಿ, ಸಹಾಯಕ ಆಡಳಿತ ಅಧಿಕಾರಿ ಹಾಗೂ ಬೆರಳಚ್ಚುಗಾರರ ಹುದ್ದೆಗಳೂ ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕರ 6 ಹುದ್ದೆಗಳಲ್ಲಿ 3 ಮಾತ್ರ ಭರ್ತಿಯಾಗಿವೆ. ಹಿರಿಯ ವಾಹನ ಚಾಲಕರ 7 ಹುದ್ದೆಗಳಲ್ಲಿ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ ದರ್ಜೆಯ 170 ಹುದ್ದೆಗಳಲ್ಲಿ 168 ಖಾಲಿಯಾಗಿದ್ದು, 95 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ.
ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ ಗ್ರಾಮೀಣ ಭಾಗದ ಪಶು ಚಿಕಿತ್ಸಾ ವ್ಯವಸ್ಥೆ ಬಲಪಡಿಸಬೇಕು ಎಂಬುದು ಹೈನುಗಾರರ ಪ್ರಮುಖ ಬೇಡಿಕೆಯಾಗಿದೆ.
ಮುಂಡಾಜೆ, ಕೆಮ್ರಾಲ್, ಕಲ್ಮಡ್ಕ, ಕಾಯರ್ತಡ್ಕ, ನೀರುಡೆ, ಎಕ್ಕಾರು ಹಾಗೂ ಸೂರಿಂಜೆ ಸೇರಿದಂತೆ ಹಲವು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿಯೇ ಇಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಹೈನುಗಾರರು ದೂರದ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ಹಲವು ವಷರ್ಗಳಿಂದ ಹುದ್ದೆಗಳು ಖಾಲಿ ಉಳಿದಿರುವ ಪರಿಣಾಮ ಔಷಧ ಹಾಗೂ ವೈದ್ಯಕೀಯ ಸೇವೆ ಸಕಾಲಕ್ಕೆ ದೊರೆಯುತ್ತಿಲ್ಲ. ಸಿಬ್ಬಂದಿ ಇಲ್ಲದೆ ಚಿಕಿತ್ಸಾ ಕೇಂದ್ರಗಳು ಅನಾಥವಾಗಿವೆ. ಮುಂಡಾಜೆ ಸೇರಿದಂತೆ ಕೆಲವು ಕೇಂದ್ರಗಳಿಗೆ ಸೂಕ್ತ ಸಂಪರ್ಕ ರಸ್ತೆ ಕೊರತೆಯೂ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.
ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ 499ರಲ್ಲಿ 377 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇರುವ ವೈದ್ಯರು, ಸಿಬ್ಬಂದಿಯನ್ನು ಹೊಂದಿಸಿಕೊಂಡು ಕರ್ತವ್ಯ ನಿರ್ವಹಿಸಲಾಗುತ್ತಿದೆ.
— ಡಾ.ಅರುಣ್ ಕುಮಾರ್ ಶೆಟ್ಟಿ, ನಿರ್ದೇಶಕ, ಪಶುಪಾಲನಾ ಇಲಾಖೆ ಮಂಗಳೂರು