ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಉಡುಪಿ ಸಂಸದ ಕೋಟ ಪೂಜಾರಿ ಮಾಹಿತಿ
* ಕೇಂದ್ರ ಸರ್ಕಾರದಿಂದ ಅನುಮೋದನೆ
ಉಡುಪಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಕ್ಷೇಮ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 29 ಆರೋಗ್ಯ ಕೇಂದ್ರ ಕಟ್ಟಡ ಮಂಜೂರಾಗಿದ್ದು, 34.50 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರತಿ ಕಟ್ಟಡಕ್ಕೆ 65 ಲಕ್ಷ ರೂ. ಅನುಮೋದನೆ ನೀಡಲಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ನೀಡಂಬಳ್ಳಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ನಿಟ್ಟೆಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಆರಂಭಗೊಳ್ಳಲಿದೆ. ಕೇಂದ್ರ ಸರ್ಕಾರದ 15ನೇ ಹಣಕಾಸಿನ ಯೋಜನೆಯಡಿ ಮಂಜೂರಾಗಿರುವ ಕಟ್ಟಡದ ಪೈಕಿ 17 ಉಪಕೇಂದ್ರಗಳ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. 3 ಉಪಕೇಂದ್ರ ಕಟ್ಟಡಗಳು ಈಗಾಗಲೇ ಕಾರ್ಯಾರಂಭ ಮಾಡಿದೆ. 7 ಉಪಕೇಂದ್ರದ ಕಾಮಗಾರಿ ಆರಂಭಿಸಲು ದಿನಾಂಕ ನಿಗದಿ ಮಾಡಲಾಗಿದೆ.
ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಜನವಸತಿ ಪ್ರದೇಶದಲ್ಲಿ ಮತ್ತು ಬಡವರು ಹೆಚ್ಚು ವಾಸವಿರುವ ಸ್ಥಳ ಗುರುತಿಸಿ ಕೇಂದ್ರ ಸರ್ಕಾರ ಮಾನದಂಡ ಹೊರಡಿಸಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಸಂಸದ ಕೋಟ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.