ಕಾರ್ಕಳ-ಪಡುಬಿದ್ರೆ ಹೆದ್ದಾರಿ ಬಳಿಯ ತಂಗುದಾಣವೊಂದು ಪೊದೆಯಿಂದ ಆವೃತವಾಗಿರುವುದು. 
ಉಡುಪಿ

ಪಡುಬಿದ್ರಿ-ಕಾರ್ಕಳ ಹೆದ್ದಾರಿಯ 30ಕ್ಕೂ ಹೆಚ್ಚು ಕಟ್ಟಡಗಳು ಪೊದೆಗಳಿಂದ ಆವೃತ

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪಡುಬಿದ್ರೆ-ಕಾರ್ಕಳ ಹೆದ್ದಾರಿ ಬಳಿ ನಿರ್ಮಿಸಲಾದ 30ಕ್ಕೂ ಅಧಿಕ ಪ್ರಯಾಣಿಕರ ತಂಗುದಾಣಗಳು ಸೂರ್ಕ ನಿರ್ವಹಣೆಯಿಲ್ಲದೆ ಹುಲ್ಲು ಪೊದೆಗಳಿಂದ ಆವೃತವಾಗಿ ಪಾಳುಬಿದ್ದ ಕೊಂಪೆಗಳಂತಾಗಿವೆ. ಮಳೆ, ಬಿಸಿಲಿನಲ್ಲಿ ಜನರಿಗೆ ಆಶ್ರಯ ನೀಡಬೇಕಾದ ಈ ತಂಗುದಾಣಗಳು ಜನರ ಉಪಯೋಗಕ್ಕೆ ಬಾರದಂತಾಗಿವೆ.
ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಈ ತಂಗುದಾಣಗಳನ್ನು ಕೆಶಿಪ್ ವತಿಯಿಂದ ನಿರ್ಮಿಸಲಾಗಿತ್ತು. ಬಳಿಕ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದರೂ ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿಗಳ ನಿರ್ಲಕ್ಷ್ಯದಿಂದ ನಿರ್ವಹಣೆಯೇ ಇಲ್ಲದೆ ಸಂಪೂರ್ಣ ಪೊದೆಗಳಿಂದ ಆವರಿಸಿವೆ.
ಪ್ರಯಾಣಿಕರು ಮರಗಳ ಕೆಳಗೆ, ರಸ್ತೆ ಬದಿಯಲ್ಲೇ ಬಸ್‌ಗಾಗಿ ಕಾಯುತ್ತ ನಿಲ್ಲುವಂತಹ ಸ್ಥಿತಿ ನಿರ್ವಾಣವಾಗಿದೆ. ನಿಟ್ಟೆ, ನಂದಳಿಕೆ, ಬೆಳ್ಮಣ್, ಸಾಂತೂರು, ಅಡ್ವೆ ಸೇರಿದಂತೆ ಪಡುಬಿದ್ರೆ ಸಮೀಪದ ನಂದಿಕೂರಿನಲ್ಲಿ ತಂಗುದಾಣಗಳು ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ. ತಂಗುದಾಣಗಳ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪೊದೆಗಳನ್ನು ತೆರವು ಮಾಡಿ ತಂಗುದಾಣಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಬೇಕಿದೆ.
ಹಣ ಪೋಲು: ಕೆಲವು ತಂಗುದಾಣಗಳು ಸಂಪೂರ್ಣ ಪೊದೆಗಳಿಂದಲೇ ಮುಚ್ಚಿ ಹೋಗಿದ್ದು, ಅಲ್ಲಿ ಪ್ರಯಾಣಿಕರ ತಂಗುದಾಣ ಇದೆ ಎಂಬುದೇ ಗೊತ್ತಾಗುವುದಿಲ್ಲ. ಇನ್ನೂ ಕೆಲವು ಕಡೆ ಕುಳಿತುಕೊಳ್ಳಲು ಸಾಧ್ಯವಿಲ್ಲದಷ್ಟು ಅಶುಚ್ವಿತದಿಂದ ಕೂಡಿವೆ. ತಂಗುದಾಣಗಳ ಒಳಗೆ ಮತ್ತು ಹೊರಗೆ ಪೊದೆ ತುಂಬಿರುವುದರಿಂದ ಹಾವು, ಇತರೆ ವಿಷ ಜಂತುಗಳ ಭಯ ಪ್ರಯಾಣಿಕರನ್ನು ಕಾಡುತ್ತಿದೆ. ತಂಗುದಾಣಗಳ ನಿರ್ವಾಣಕ್ಕೆ ಸಾವಿರಾರು ರೂಪಾಯಿ ಖರ್ಚು ವಾಡಿದ್ದು, ಈಗ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಾಗಿವೆ.

ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣ ಇದ್ದರೂ ಇಲ್ಲದಂತಾಗಿದೆ. ಮಳೆ ಬಂದಾಗ ನಿಲ್ಲಲು ಜಾಗವಿಲ್ಲ. ತಕ್ಷಣವೇ ಈ ಪೊದೆಗಳನ್ನು ತೆರವುಗೊಳಿಸಿ, ಸ್ವಚ್ಛ ಮಾಡಬೇಕಿದೆ. ಹುಲ್ಲು ಪೊದೆಗಳಿಂದ ಆವೃತವಾಗಿರುವ ತಂಗುದಾಣ ಬಳಕೆಗೆ ಯೋಗ್ಯವಾಗಿಲ್ಲ.

ತಂಗುದಾಣಗಳ ನಿರ್ವಹಣೆ ಜವಾಬ್ದಾರಿ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಅಥವಾ ನಿರ್ಲಕ್ಷ್ಯದಿಂದಾಗಿ ನಿರ್ವಹಣೆ ಸಂಪೂರ್ಣವಾಗಿ ನಿಂತು ಹೋಗಿದೆ.

ಪಡುಬಿದ್ರಿ ಕಾರ್ಕಳ ಹೆದ್ದಾರಿಯ 30ಕ್ಕೂ ಹೆಚ್ಚು ಕಟ್ಟಡಗಳು ಪೊದೆಗಳಿಂದ ಆವೃತ buildings on the Padubidri Karkala highway are covered with bushes