ಉಡುಪಿ: ಹಿರಿಯ ನಾಗರಿಕರಿಗೆ ಸುರಕ್ಷತೆ, ಘನತೆಯ ಜೀವನ ನಡೆಸಲು, ಅವರ ಕಲ್ಯಾಣಕ್ಕಾಗಿ ಸರ್ಕಾರ ಕಾಯಿದೆ ಹಾಗೂ ಅನೇಕ ಕಾರ್ಯಕ್ರಮ ಜಾರಿಗೆ ತಂದಿದೆ. ಅದನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮಕ್ಕಳು ಅಥವಾ ಹೆತ್ತವರು ಪರಸ್ಪರ ನಿರ್ಲಕ್ಷಿಸುವುದು, ತ್ಯಜಿಸುವುದು ಕಂಡುಬಂದಲ್ಲಿ ಅಂತಹವರಿಗೆ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ರಕ್ಷಣೆ ಕಾಯ್ದೆಯನ್ವಯ ಮೂರು ತಿಂಗಳು ಜೈಲುವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಅ.6) ಆಯೋಜಿಸಿದ್ದ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯಿದೆ-2007ರಡಿ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.
ಹಿರಿಯರಿಗೆ ನೀಡಿ ಮೊದಲ ಆದ್ಯತೆ
ಹಿರಿಯ ನಾಗರಿಕರ ಪಾಲನೆ, ಪೋಷಣೆಗೆ ಅರ್ಜಿ ಹಾಗೂ ಆಸ್ತಿ ಸಂರಕ್ಷಣೆಯ ಅರ್ಜಿಗಳು ನ್ಯಾಯಾಧೀಕರಣದ ಮುಂದೆ ಬಂದಾಗ ಸಕಾಲದಲ್ಲಿ ವಿಲೇವಾರಿ ಮಾಡಿ ನ್ಯಾಯ ಒದಗಿಸಬೇಕು. ಜಿಲ್ಲೆಯ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಿರಿಯರು ಅದರಲ್ಲೂ ಒಂಟಿಯಾಗಿ ವಾಸಿಸುತ್ತಿರುವವರು ಸೇರಿದಂತೆ 2,870 ಜನರ ಪರಿಷ್ಕೃತ ಪಟ್ಟಿಯ ನಿರ್ವಹಣೆಗಾಗಿ ವಾರದಲ್ಲಿ ಒಮ್ಮೆ ಬೀಟ್ ಪೊಲೀಸರು ಮನೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಬೇಕು. ಅವರಿಗೆ ಸಮಸ್ಯೆಗಳಿದ್ದಲ್ಲಿ ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಡಿಎಚ್ಒ ಡಾ. ಬಸವರಾಜ್ ಹುಬ್ಬಳ್ಳಿ, ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿರಿಯ ನಾಗರಿಕರು ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಮಕ್ಕಳು, ಸಂಬಂಧಿಕರಿಗೆ ದಾನಪತ್ರದ ಮೂಲಕ ವರ್ಗಾಯಿಸುತ್ತಾರೆ. ಬಳಿಕ ಅವರು ಹಿರಿಯರನ್ನು ಸರಿಯಾಗಿ ಪಾಲನೆ ಮಾಡದೇ ಇರಬಹುದು. ಕೆಲವೊಮ್ಮೆ ಮೋಸದಿಂದಲೂ ಸಹ ಆಸ್ತಿಯ ದಾಖಲೆ ಸೃಷ್ಟಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ದಸ್ತಾವೇಜುಗಳನ್ನು ಅಸಿಂಧು ಎಂದು ಘೋಷಿಸಿ, ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಬಗ್ಗೆ ಹಿರಿಯ ನಾಗರಿಕರಿಗೆ ಅರಿವು ಮೂಡಿಸಬೇಕು. ಶಾಲಾ-ಕಾಲೇಜ್ಗಳಲ್ಲಿ ಹಿರಿಯರು ಹಾಗೂ ಕಿರಿಯರ ನಡುವಿನ ಬಾಂಧವ್ಯ, ಹಿರಿಯರ ಬಗ್ಗೆ ಉತ್ತಮ ಮೌಲ್ಯ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಡಿಸಿ ಸ್ವರೂಪಾ ಸೂಚಿಸಿದರು.
ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳು ಸರ್ಕಾರದ ಮಾರ್ಗಸೂಚಿ, ಆದೇಶಗಳನ್ನು ಪಾಲಿಸಬೇಕು. ಹಿರಿಯ ನಾಗರಿಕರ ಸಹಾಯವಾಣಿ 1090ಕ್ಕೆ ಕರೆಗಳು ಬಂದಾಗ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಜಿಲ್ಲೆಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಬಂದಿರುವ ಪ್ರಸ್ತಾವನೆ ಪರಿಶೀಲಿಸಿ, ವೈದ್ಯರು, ಸೂಕ್ತ ಜಾಗ ಸೇರಿದಂತೆ ನಿಯಮಾನುಸಾರ ಎಲ್ಲ ವ್ಯವಸ್ಥೆ ಇದ್ದಲ್ಲಿ ಅನುಮತಿ ನೀಡಬೇಕು.ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.