ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುರಳಿ ಕಡೆಕಾರ್ ಮಾತನಾಡಿದರು. ಎಂ. ಗಂಗಾಧರ ರಾವ್, ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ ರಾವ್, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ನ.23ರಂದು ಉಡುಪಿಯ ಐವೈಸಿಯಲ್ಲಿ ಪ್ರದಾನ
ಉಡುಪಿ: ಯಕ್ಷಗಾನ ಕಲಾರಂಗದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ನ.23ರಂದು ಸಂಜೆ 4:30ಕ್ಕೆ ನಡೆಯಲಿದ್ದು, 23 ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸೋಮವಾರ (ನ.17) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಆಶೀರ್ವಚನ ನೀಡಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಡಾ. ಜಿ. ಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಎಂ.ರಾಘವೇಂದ್ರ ಭಟ್ ಶುಭಾಶಂಸನೆ ಮಾಡುವರು. ಸುಪ್ರಭಾತ ಗ್ರೂಪ್ ಆಫ್ ಹೋಟೆಲ್ನ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಅವರು ಯಕ್ಷ ವಿದ್ಯಾಪೋಷಕ್ನ 62 ವಿದ್ಯಾರ್ಥಿಗಳಿಗೆ ಸಹಾಯಧನ (ಒಟ್ಟು 7,11,500 ರೂ.) ವಿತರಿಸಲಿದ್ದಾರೆ ಎಂದರು.
ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ, ಬೆಂಗಳೂರು ಟೆಕ್ಸೆಲ್ ಪ್ರೈ. ಲಿ. ಆಡಳಿತ ನಿರ್ದೇಶಕ ಹರೀಶ್ ರಾಯಸ್, ಬೆಂಗಳೂರಿನ ವೈದ್ಯ ಡಾ. ಕಬ್ಯಾಡಿ ಹರಿರಾಂ ಆಚಾರ್ಯ, ಮಂದಾರ್ತಿ ಕೆ.ಎಂ. ಉಡುಪ ಟ್ರಸ್ಟ್ನ ವಿಶ್ವಸ್ಥ ಕೆ.ಮಹೇಶ್ ಉಡುಪ, ಬಂಟ್ವಾಳದ ಅಡಕೆ ಪತ್ರಿಕೆಯ ಪ್ರಕಾಶಕ ಡಾ. ಪಡಾರು ರಾಮಕೃಷ್ಣ ಶಾಸ್ತ್ರಿ, ಮಂಗಳೂರಿನ ನಮ್ಮ ಕುಡ್ಲದ ಆಡಳಿತ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಪಾಲ್ಗೊಳ್ಳಲಿದ್ದಾರೆ ಎಂದು ಮುರಳಿ ಕಡೆಕಾರ್ ತಿಳಿಸಿದರು.
ವಿಶ್ವೇಶ ತೀರ್ಥ ಪ್ರಶಸ್ತಿ
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮಾತನಾಡಿ, ಪ್ರಶಸ್ತಿ ಪುರಸತರಿಗೆ ತಲಾ 20 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ಅಲ್ಲದೆ, 1 ಲಕ್ಷ ರೂ. ಮೊತ್ತದ ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿಯನ್ನು ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿ ಸಂಸ್ಥೆಗೆ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯ ಕಾರ್ಯದರ್ಶಿಯಾದ ಮುರಲಿ ಕಡೆಕಾರ್ ಅವರಿಗೆ ಯಕ್ಷ ಚೇತನ ಪ್ರಶಸ್ತಿ ನೀಡಲಾಗುತ್ತಿದೆ. ಸಮಾರಂಭಕ್ಕೂ ಮೊದಲು ಮಧ್ಯಾಹ್ನ 1:30ರಿಂದ ಬಡಗುತಿಟ್ಟಿನ ಕಲಾವಿದರಿಂದ 'ತಾಮ್ರಧ್ವಜ ಕಾಳಗ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಪ್ರಶಸ್ತಿ ಪುರಸ್ಕೃತರ ಮಾಹಿತಿ
ಸುಬ್ರಹ್ಮಮಣ್ಯ ಚಿಟ್ಟಾಣಿ, ಕಕ್ಕುಂಜೆ ಗೋಪಾಲ ಬಳೆಗಾರ, ಕೊಡೇರಿ ಕೃಷ್ಣ, ಕಲ್ಲಗುಡ್ಡೆ ಲಕ್ಷ್ಮಣ ಪೂಜಾರಿ, ಸೂರನಕೇರಿ ರಾಧಾಕೃಷ್ಣ ಭಟ್, ಸುರೇಶ್ ಉಪ್ಪೂರ, ಬದ್ಕಲ್ಕಟ್ಟೆ ಕೃಷ್ಣಯ್ಯ ಬಿ. ಆಚಾರ್, ಮನೋಹರ್ ರಾವ್ ಕೆ.ಜಿ. ಸೀತೂರು, ಪ್ರಭಾಕರ ಶೆಟ್ಟಿ ಮಡಾಮಕ್ಕಿ, ವಿಷ್ಣು ಮಂಜಪ್ಪ ಆಚಾರಿ ಬಳ್ಕೂರು, ಲಕ್ಷ್ಮೀನಾರಾಯಣ ಸಂಪ, ಸಂಜೀವ ಶೆಟ್ಟಿ ಆಜ್ರೀಹರ, ಸುಣ್ಣಂಬಳ ವಿಶ್ವೇಶ್ವರ ಭಟ್, ಸುರೇಶ್ ರಾವ್ ಬಾರ್ಕೂರು, ಅಪ್ಪಯ್ಯ ಮಣಿಯಾಣಿ, ಕೃಷ್ಣಮೂರ್ತಿ ಉರಾಳ, ರಾಮು ಕೇಶವ ಗೌಡ ಗುಣವಂತೆ, ಕಡಬ ರಾಮಚಂದ್ರ ಪೈ, ಉಮೇಶ ಮೊೃಲಿ ಮೂರುಕಾವೇರಿ, ಶಿವಣ್ನ ಶೆಟ್ಟಿ ಸರಪಾಡಿ, ಮೋಹನ ನಾಯ್ಕ ಕೂಜಳ್ಳಿ, ಬಲಿಪ ವಿಶ್ವೇಶ್ವರ್ ಭಟ್, ಮಹಾಬಲ ಭಟ್ ಭಾಗಮಂಡಲ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್, ಸಹ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.