ಉಡುಪಿಯಲ್ಲಿ ನಡೆದ ವಿಮಾ ನೌಕರರ ಸಂದ ಮಹಿಳಾ ಸಮಾವೇಶದಲ್ಲಿ ಎಂ. ಕಾಮೇಶ್ವರಿ ಮಾತನಾಡಿದರು. ಕೆ. ವಿಶ್ವನಾಥ್​, ನಿರ್ಮಲಾ, ಕವಿತಾ ಎಸ್​. ಇದ್ದರು. 
ಉಡುಪಿ

ಮಹಿಳೆಯರಿಗೆ ತಪ್ಪದ ನಿರಂತರ ಶೋಷಣೆ

* ಒಕ್ಕೂಟದ ಉಪಾಧ್ಯಕ್ಷೆ ಎಂ. ಕಾಮೇಶ್ವರಿ ಅಸಮಾಧಾನ

* ವಿಮಾ ನೌಕರರ ಸಂಘ ಉಡುಪಿ ವಿಭಾಗದ ಸಮಾವೇಶ

ಉಡುಪಿ: ಭಾರತದ ಇತ್ತೀಚೆಗಿನ ಆರ್ಥಿಕ ಸರ್ವೆ ಪ್ರಕಾರ ಶೇ.40ರಷ್ಟು ಮಹಿಳೆ ವಿವಿಧ ಉದ್ಯೋಗಗಳಲ್ಲಿ ಹಾಗೂ ಶೇ.7ರಷ್ಟು ಮಹಿಳೆಯರು ನೈರ್ಮಲ್ಯ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎಲ್ಲ ಅಸಂಘಟಿತ ವಲಯಗಳಲ್ಲಿಯೂ ವೇತನ ತಾರತಮ್ಯ, ಕಿರುಕುಳ ಅನುಭವಿಸುತ್ತಿದ್ದಾರೆ. ಸಾಫ್ಟ್ ವೇರ್​ ಕಂಪನಿಗಳಲ್ಲಿ ದುಡಿಯುವ ಮಹಿಳೆ ಗರ್ಭಿಣಿಯಾದರೆ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯ ಮೇಲೆ ನಿರಂತರ ಶೋಷಣೆ ನಡೆದಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷೆ ಎಂ. ಕಾಮೇಶ್ವರಿ ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿಯ ಲಿಕೋ ಬ್ಯಾಂಕ್​ ಸಭಾಂಗಣದಲ್ಲಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಶನಿವಾರ (ಜ.31) ಆಯೋಜಿಸಿದ್ದ 21ನೇ ವಿಭಾಗೀಯ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹೋರಾಟ ಅನಿವಾರ್ಯ

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಅವ್ಯಾಹತವಾಗಿ ಹೆಣ್ಣು ಮಕ್ಕಳ ಮರ್ಯಾದಾ ಹತ್ಯೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪ್ರಸಕ್ತ ನಾಲ್ಕು ಹೊಸ ಕಾರ್ಮಿಕ ಸಂಹಿತೆಯು ಕಾರ್ಮಿಕರ ಸಂವಿಧಾನಬದ್ಧ ಹಕ್ಕು ಕಸಿಯುತ್ತಿದೆ. ಮಹಿಳಾ ಕಾರ್ಮಿಕರನ್ನು ಇನ್ನಷ್ಟು ದುರ್ಬಲರನ್ನಾಗಿಸಲು ಕಾರ್ಮಿಕ ಸಂಹಿತೆಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಹಿಳಾ ಕಾರ್ಮಿಕರು ಎಐಐಇಎ ನೇತೃತ್ವದಲ್ಲಿ ಒಗ್ಗಟ್ಟಾಗಬೇಕಿದೆ. ಮಹಿಳಾ ಸಮಾನತೆಗೆ ಮತ್ತು ಸಬಲೀಕರಣಕ್ಕೆ ಎದುರಾಗಿರುವ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲಲು ಹೋರಾಡಬೇಕಿದೆ ಎಂದು ಕಾಮೇಶ್ವರಿ ತಿಳಿಸಿದರು.
ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ನೇತೃತ್ವದಲ್ಲಿ ಮಹಿಳಾ ಚಳವಳಿಗಳು ನಡೆದುಬಂದ ರೀತಿ ವಿವರಿಸಿದರು. ಸಂಘದ ಮಹಿಳಾ ಉಪಸಮಿತಿಯ ಸಂಚಾಲಕಿ ನಿರ್ಮಲಾ ಮಾತನಾಡಿ, ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಬಹಳಷ್ಟು ಕಟ್ಟುಪಾಡು ಹೊಂದಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳೂ ಹೆಚ್ಚುತ್ತಿವೆ ಎಂದರು.
ಶಿಲ್ಪಾ ಜೆ. ರೆಬೆಲ್ಲೋ ಮಹಿಳಾ ಉಪ ಸಮಿತಿಗೆ ಸಂಚಾಲಕಿಯಾಗಿ ಹಾಗೂ ಸೀತಾಲಕ್ಷ್ಮೀ ಆರ್​. ಉಪಸಂಚಾಲಕಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ಕೋಶಾಧಿಕಾರಿ ಕವಿತಾ ಎಸ್​. ಉಪಸ್ಥಿತರಿದ್ದರು. ಶಿಲ್ಪಾ ಜೆ. ರೆಬೆಲ್ಲೋ ಕಾರ್ಯಕ್ರಮ ನಿರ್ವಹಿಸಿದರು.
"

ಕಾರ್ಮಿಕ ಸಂಘಟನೆಗಳು ದೇಶಕ್ಕೆ ಕಂಟಕಪ್ರಾಯವಾಗಿವೆ ಮತ್ತು ಅವು ಕೇವಲ ಝಂಡಾ ಸಂಘಟನೆ ಎಂದು ಸುಪ್ರೀಂ ಕೋರ್ಟ್​ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಯೊಬ್ಬರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಅವರು ಆ ರೀತಿ ಹೇಳಿಕೆ ನೀಡುವ ಮೊದಲು ದೇಶದ ಕಾರ್ಮಿಕ ಸಂಘಟನೆಗಳ ಸುದೀರ್ಘ ಇತಿಹಾಸ ತಿಳಿದುಕೊಂಡು ಮಾತನಾಡಿದ್ದರೆ ಒಳಿತಾಗುತ್ತಿತ್ತು.