ಉಡುಪಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನವನ್ನು ಸ್ವರೂಪಾ ಟಿ.ಕೆ. ಉದ್ಘಾಟಿಸಿದರು. ಪ್ರತೀಕ್​ ಬಾಯಲ್​, ಅಬೀದ್​ ಗದ್ಯಾಳ, ಕೆ.ಎಸ್​. ಜ್ಯೋತಿಶ್ರೀ, ಸುಧಾಕರ್​ ನಾಯ್ಕ, ಶಿವಪ್ರಸಾದ್​ ಶೆಟ್ಟಿ ಇದ್ದರು. 
ಉಡುಪಿ

ಮತದಾನದಿಂದ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠ

* ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಭಿಪ್ರಾಯ

* ರಾಷ್ಟ್ರೀಯ ಮತದಾರರ ದಿನ ಉದ್ಘಾಟನೆ

ಉಡುಪಿ: ಭಾರತವು ಪ್ರಜಾಪ್ರಭುತ್ವದ ದೇಶವಾಗಿದ್ದು, ಮತದಾನ ಮಾಡುವುದು ಪ್ರತಿಯೊಬ್ಬ ಅರ್ಹ ನಾಗರಿಕರ ಹಕ್ಕು ಮತ್ತು ಕರ್ತವ್ಯವಾಗಿದೆ. 18 ವರ್ಷ ಮೇಲ್ಪಟ್ಟವರೆಲ್ಲ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ. ಸದೃಢ ಭಾರತ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಭಿಪ್ರಾಯಪಟ್ಟರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಲಯನ್ಸ್​ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಭಾನುವಾರ (ಜ.25) ಆಯೋಜಿಸಿದ್ದ ರಾಷ್ಟ್ರೀಯ 16ನೇ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಯಾವುದೇ ಆಮಿಷಕ್ಕೆ ಒಳಗಾಗಬೇಡಿ

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್​ ಬಾಯಲ್​ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಬಲಿದಾನದಿಂದ ದೇಶವು ಗುಲಾಮಗಿರಿಯಿಂದ ಮುಕ್ತವಾಯಿತು. ಸಂವಿಧಾನದ ಮೂಲಕ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಗಳಿಸಿದ್ದೇವೆ. ತನ್ಮೂಲಕ ಮತದಾನದ ಅಧಿಕಾರ ಗಳಿಸಿದ್ದೇವೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗದೆ, ಮತವನ್ನು ಮಾರಾಟ ಮಾಡಿಕೊಳ್ಳದೆ ನಿರ್ಭೀತಿಯಿಂದ ಹಕ್ಕು ಚಲಾಯಿಸಬೇಕು. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಲು ನಾವೂ ಸಹ ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು ಎಂದರು.

ಬಹುಮಾನ-ಸನ್ಮಾನ

ಇದೇ ಸಂದರ್ಭದಲ್ಲಿ ಯುವ ಮತದಾರರಿಗೆ ಎಪಿಕ್​ ಕಾರ್ಡ್​ ವಿತರಿಸಲಾಯಿತು. ಮತದಾರರ ದಿನದ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಐವರು ಬಿಎಲ್​ಒ ಹಾಗೂ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್​ ಕಾರ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. 
ಸರ್ಕಾರಿ ನಿವೃತ್ತ ಅಭಿಯೋಜಕ ರಾಜು ಪೂಜಾರಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿ ಶಿವಪ್ರಸಾದ್​ ಶೆಟ್ಟಿ ವರು   'ಎಸ್​ಐಆರ್​' ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಎಸ್​. ಜ್ಯೋತಿಶ್ರೀ, ಜಿಲ್ಲಾ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯ್ಕ ಉಪಸ್ಥಿತರಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಸ್ವಾಗತಿಸಿದರು. ಗಂಗಾಧರ್​ ಕೆ. ಕಾರ್ಯಕ್ರಮ ನಿರೂಪಿಸಿದರು.
"

ದೇಶದಲ್ಲಿ ಚುನಾವಣಾ ಆಯೋಗ ಸ್ಥಾಪನೆಯಾದ ಸಂಸ್ಮರಣೆಗಾಗಿ 2011ರಿಂದ ಪ್ರತಿವರ್ಷ ಜ.25ಅನ್ನು ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪಾರದರ್ಶಕ ಮತದಾನಕ್ಕಾಗಿ ಆಯೋಗವು ನಾಗರಿಕ ಸ್ನೇಹಿ ತಂತ್ರಜ್ಞಾನ ಪರಿಚಯಿಸಿದೆ. ಮತದಾನ ಐಚ್ಛಿಕವಾಗಿದ್ದು, ಹೆಚ್ಚು ಜನರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಅರ್ಹರೆಲ್ಲರೂ ತಪ್ಪದೆ ಚಲಾಯಿಸಬೇಕು.