ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಉದ್ಯೋಗಾಕಾಂಕ್ಷಿಗಳು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಸ್‌ಡಿಎಂ ಪಾಲಿಟೆಕ್ನಿಕ್ ಸಹಯೋಗದಲ್ಲಿ ಎರಡು ದಿನಗಳ ಎಸ್‌ಡಿಎಂ ಉದ್ಯೋಗಂ-2026 ಬೃಹತ್ ಉದ್ಯೋಗ ಮೇಳ ಸಂಪನ್ನಗೊಂಡಿತು.
1,776 ಉದ್ಯೋಗಾಕಾಂಕ್ಷಿಗಳು ಹಾಗೂ ದೇಶದ 124 ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಿದ್ದು, ಹಲವು ಹುದ್ದೆಗಳಿಗೆ ಸಂದರ್ಶನ ನಡೆದು 1,390 ಉದ್ಯೋಗಾಕಾಂಕ್ಷಿಗಳು ಆಯ್ಕೆಯಾದರು. ಬಹು ಕಂಪನಿಗಳಿಗೆ ಸಂದರ್ಶನ ನೀಡುವ ಅವಕಾಶ ಕಲ್ಪಿಸಲಾಗಿದ್ದ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳಿಗೆ ಎರಡಕ್ಕೂ ಅಧಿಕ ಕಂಪನಿಗಳಲ್ಲಿ ಉದ್ಯೋಗ ಆಫರ್ ದೊರೆಯಿತು.
ಐಟಿ ಮತ್ತು ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಫಾರ್ಮಾಸ್ಯೂಟಿಕಲ್ಸ್, ಬ್ಯಾಂಕಿಂಗ್ ಮತ್ತು ಫೈನಾನ್ಸ್, ಐಟಿ ಮತ್ತು ಐಟಿಇಎಸ್, ಸೇಲ್ಸ್ ಮತ್ತು ಮಾರ್ಕೆಟಿಂಗ್, ರಿಟೇಲ್ ಮತ್ತು ಸೇಲ್ಸ್, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆತಿಥ್ಯ, ಅಕೌಂಟಿಂಗ್ ಮತ್ತು ಟ್ಯಾಕ್ಸ್ ಕನ್ಸಲ್ಟೆನ್ಸಿ, ಉತ್ಪಾದನೆ, ಅಟೋಮೊಬೈಲ್, ಟೆಲಿಕಾಂ ಮತ್ತು ಮೀಡಿಯಾ, ಕನ್‌ಸ್ಟ್ರಕ್ಷನ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಹಾಗೂ ಫೈನಾನ್ಶಿಯಲ್ ಕನ್ಸಲ್ಟೆನ್ಸಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಹುದ್ದೆಗಳಿದ್ದವು.
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಅವಕಾಶ
ಉದ್ಯೋಗ ಮೇಳದಲ್ಲಿ ಪಿಯುಸಿ, ಬಿಎ, ಬಿಬಿಎ, ಬಿ.ಕಾಂ, ಬಿಸಿಎ, ಬಿ.ಎಸ್ಸಿ, ಬಿ.ವೋಕ್, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಬಿ.ಟೆಕ್, ಬಿ.ಎಡ್, ಎಂಎ, ಎಂಸಿಜೆ, ಎಂಎಸ್‌ಡಬ್ಲುೃ, ಎಂಕಾಂ, ಎಂಸಿಎ, ಎಂ.ಎಸ್ಸಿ, ಎಂಬಿಎ ಮತ್ತು ಜಿಎನ್‌ಎಂ ನರ್ಸಿಂಗ್ ಸೇರಿದಂತೆ ಹಲವು ಶೈಕ್ಷಣಿಕ ಅರ್ಹತೆ ಹೊಂದಿದ ಅಭ್ಯರ್ಥಿಗಳು ಭಾಗವಹಿಸಿದ್ದರು. ಜಿಲ್ಲೆಯಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಂತಿಮ ಪದವಿ ಹಂತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ಎಲ್ಲರಿಗೂ ಉಚಿತ ಅವಕಾಶ ಕಲ್ಪಿಸಲಾಯಿತು.