ಕಾಸರಗೋಡು: ಪೈವಳಿಕೆ ಕುರುಡಪದವಿನಲ್ಲಿ ಮನೆ ಹೊರಗೆ ಗುಪ್ತ ಸ್ಥಳದಲ್ಲಿರಿಸಿದ್ದ ಕೀಲಿಕೈ ಬಳಸಿ ಒಳ ನುಗ್ಗಿದ್ದ ಕಳ್ಳರು, 110 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ದೋಚಿದ್ದಾರೆ. ಸುಬ್ರಾಯ ಸಾಯ ಎಂಬುವರ ನೀಡಿದ ದೂರಿನಂತೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿ ಕ್ಷೇತ್ರ ದರ್ಶನಕ್ಕೆ ಹಾಗೂ ಮಕ್ಕಳು ಶಾಲೆ, ಕಾಲೇಜಿಗೆ ತೆರಳಿದ್ದ ವೇಳೆ ಕಳವು ನಡೆದಿದೆ. ಸುಬ್ರಾಯ ಹಾಗೂ ಪತ್ನಿ ಜು.9ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದರು. ಹಿರಿಯ ಮಗ ಕಾಲೇಜಿಗೆ ಹಾಗೂ ಕಿರಿಯ ಮಕ್ಕಳು ಪೈವಳಿಕೆ ಶಾಲೆಗೆ ತೆರಳಿದ್ದರು.
ಮನೆಯ ಹೊರಗೆ ಗುಪ್ತ ಸ್ಥಳವೊಂದರಲ್ಲಿ ಕೀಲಿಕೈ ಇರಿಸಿದ್ದರು. ಕಳ್ಳರು ಕೀಲಿಕೈ ಪತ್ತೆ ಹಚ್ಚಿ ಬಾಗಿಲು ತೆರೆದು ವಜ್ರದ ನೆಕ್ಲೇಸ್, ಚಿನ್ನದ ಬಳೆ, ಬೆಂಡೋಲೆ, ಉಂಗುರ, ಮಾಲೆ ಒಳಗೊಂಡ ಆಭರಣ ಹಾಗೂ 20 ಸಾವಿರ ರೂ. ನಗದು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಸಂಶಯವಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.