ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ಇಎಸ್​ಐ ಆಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಯಶ್​ಪಾಲ್​ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು. ಜತಿನ್​ ಮೀನಾ, ವಿನಾಯಕ್​, ನಿತ್ಯಾನಂದ ಬಿ.ಆರ್​., ರಾಜೇಶ್​ ಶೆಟ್ಟಿ ಬಿರ್ತಿ, ಎಸ್​. ನಾರಾಯಣ, ನಾಗವೇಣಿ, ಉಮಾ ಬಾಯಿ ಇತರರಿದ್ದರು. 
ಉಡುಪಿ

100 ಹಾಸಿನ ಇಎಸ್​ಐ ಆಸ್ಪತ್ರೆ ಕಾಮಗಾರಿ ಆರಂಭ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

* ಬ್ರಹ್ಮಾವರದಲ್ಲಿ ಸ್ಥಳಕ್ಕೆ ಭೇಟಿ, ಪ್ರಗತಿ ಪರಿಶೀಲನೆ

ಉಡುಪಿ: ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ 5.13 ಎಕರೆ ಜಾಗದಲ್ಲಿ 100 ಹಾಸಿನ ಇಎಸ್​ಐ ಆಸ್ಪತ್ರೆ ಹಾಗೂ ಸಿಬ್ಬಂದಿಗೆ 32 ವಸತಿ ಗೃಹ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್​ ನಿಮಾರ್ಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ಇಎಸ್​ಐ ಆಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಸೋಮವಾರ (ಸೆ.28) ಭೇಟಿ ನೀಡಿ, ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಸುತ್ತಮುತ್ತಲೂ ಜನವಸತಿ ಪ್ರದೇಶವಾಗಿದ್ದು ಕಾಮಗಾರಿ ಆರಂಭಿಸುವ ಮುನ್ನ ಸ್ಥಳೀಯ ಗ್ರಾಪಂ ಹಾಗೂ ಮುಖಂಡರೊಂದಿಗೆ ಯೋಜನೆಯ ಕುರಿತು ಸಮಾಲೋಚನೆ ನಡೆಸಬೇಕು. ಮಳೆ ನೀರು, ರಸ್ತೆ ಸಂಪರ್ಕ, ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಸಹಿತ ಮೂಲ ಸೌಕರ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಎಸ್​ಐ ಇಲಾಖೆಯ ಉಪ ನಿರ್ದೇಶಕ ಜತಿನ್​ ಮೀನಾ, ಸಾಮಾಜಿಕ ಭದ್ರತಾ ಅಧಿಕಾರಿ ವಿನಾಯಕ್​, ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಿತ್ಯಾನಂದ ಬಿ.ಆರ್​., ಸ್ಥಳೀಯ ಮುಖಂಡರಾದ ರಾಜೇಶ್​ ಶೆಟ್ಟಿ ಬಿರ್ತಿ, ಎಸ್​. ನಾರಾಯಣ, ನವೀನ್​ಚಂದ್ರ ನಾಯಕ್​, ನಿರಂಜನ್​ ಶೆಟ್ಟಿ, ದೇವಾನಂದ್​, ನಾಗವೇಣಿ, ಉಮಾ ಬಾಯಿ, ರಾಜೀವ್​ ಕುಲಾಲ್​ ಇನ್ನಿತರರು ಉಪಸ್ಥಿತರಿದ್ದರು.