ಉಡುಪಿಯಲ್ಲಿ ಆಯೋಜಿಸಿದ್ದ ಡಯಾಬಿಟೀಸ್​ ಮೇಳವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಡಾ. ಜಿ.ಎಸ್​. ಚಂದ್ರಶೇಖರ್​, ಡಾ. ಅಶೋಕಕುಮಾರ್​, ಡಾ. ಬಸವರಾಜ ಹುಬ್ಬಳ್ಳಿ, ಡಾ. ಸುರೇಶ್​ ಹೆಗ್ಡೆ, ಬಸ್ರೂರು ರಾಜೀವ ಶೆಟ್ಟಿ, ಡಾ. ಅಶೋಕಕುಮಾರ್​ ವೈ,ಜಿ. ಇತರರಿದ್ದರು. 
ಉಡುಪಿ

ಉಡುಪಿ ವೈದ್ಯಕೀಯ ಕ್ಷೇತ್ರದಲ್ಲಿ 'ಆದರ್ಶ' ಸೇವೆ

 ಉಡುಪಿ: ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಯ ಮೂಲಕ ಉಡುಪಿಯು ದೇಶದ ಗಮನ ಸೆಳೆದ ಜಿಲ್ಲೆಯಾಗಿದೆ. ವಿಶೇಷವಾಗಿ ಆರೋಗ್ಯ ಸೇವೆಯಲ್ಲಿ ರಾಜ್ಯದ ಮನೆಮಾತಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಉಡುಪಿಯ ಆದರ್ಶ ಆಸ್ಪತ್ರೆಯು ಸ್ಥಳೀಯವಾಗಿ ಹಾಗೂ ಹೊರ ಜಿಲ್ಲೆಗಳ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುತ್ತಿದೆ. ಮಧುಮೇಹ ಕಾಯಿಲೆಯ ನಿಯಂತ್ರಣದ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುತ್ತಿರುವ ಆದರ್ಶ ಆಸ್ಪತ್ರೆಯ ಕಾರ್ಯ ಶ್ರೇಷ್ಠವಾದದ್ದು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘಿಸಿದರು.
 ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್​ ಹೈಸ್ಕೂಲ್​) ಮೈದಾನದಲ್ಲಿ ಆದರ್ಶ ಚಾರಿಟೇಬಲ್​ ಟ್ರಸ್ಟ್​, ಜಿಲ್ಲಾಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ರೆಡ್​ಕ್ರಾಸ್​ ಸಂಸ್ಥೆಯ ಸಹಕಾರದಲ್ಲಿ ವಿಶ್ವ ಮಧುಮೇಹ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಡಯಾಬಿಟೀಸ್​ ಮೇಳ ಉದ್ಘಾಟಿಸಿ ಮಾತನಾಡಿದರು. 

ಸಮರ್ಪಕ ಜೀವನ ಶೈಲಿ ಅಗತ್ಯ

 ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಅಸಮರ್ಪಕ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಆನುವಂಶಿಕವಾಗಿಯೂ ಡಯಾಬಿಟೀಸ್​ ಬರುತ್ತದೆ. ಹೀಗಾಗಿ ಮಧುಮೇಹ ಬರದಂತೆ ಮೊದಲೇ ಜಾಗೃತಿ ವಹಿಸಲು ಉತ್ತಮ ಜೀವನ ಶೈಲಿ ಅನುಸರಿಸಬೇಕು. ಅದರಲ್ಲೂ ಆಹಾರ ಪದ್ಧತಿ ಸಮರ್ಪಕ ಹಾಗೂ ಪೂರಕವಾಗಿರಬೇಕು. ಡಯಾಬಿಟೀಸ್​ ಕಾಯಿಲೆ ಬಂದರೆ ಹೆದರಬಾರದು. ಸೂಕ್ತ ಔಷಧೋಪಚಾರದ ಮೂಲಕ ನಿಯಂತ್ರಿಸಬಹುದು. ನಡಿಗೆ, ವ್ಯಾಯಾಮ, ಕ್ರಮಬದ್ಧ ಆಹಾರ ಸೇವನೆಯ ಕ್ರಮ ಅನುಸರಿಸಬೇಕು. ಇಲ್ಲದಿದ್ದರೆ ಕಿಡ್ನಿ, ಲೀವರ್​, ಕಣ್ಣು ಸೇರಿದಂತೆ ದೇಹದ ಇನ್ನಿತರ ಅಂಗಾಗಳಿಗೂ ಸಹ ಮಧುಮೇಹದಿಂದ ತೊಡಕಾಗುತ್ತದೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಎಪಿಐ ಅಧ್ಯಕ್ಷ ಡಾ. ಸುರೇಶ್​ ಹೆಗ್ಡೆ, ಐಎಂಎ ಅಧ್ಯಕ್ಷ ಡಾ. ಅಶೋಕ್​ ಕುಮಾರ್​, ರೆಡ್​ ಕ್ರಾಸ್​ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ಜಿಲ್ಲಾ ರೆಡ್​ಕ್ರಾಸ್​ನ ಅಧ್ಯಕ್ಷ ಡಾ. ಅಶೋಕಕುಮಾರ್​ ವೈ,ಜಿ., ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್​, ನಿರ್ದೇಶಕ ಡಾ. ಸುಹಾಸ್​ ಜಿ.ಸಿ., ಮೆನೇಜರ್​ ಡಿಯಾಗೋ ಕ್ವಾಡ್ರಸ್​, ಮಾರುಕಟ್ಟೆ ವಿಭಾಗದ ರೋವಿನ್​ ಡಿಸೋಜಾ, ಆಡಳಿತಾಧಿಕಾರಿ ಡಾ. ಪ್ರಶಾಂತ ಪಿ.ಜಿ. ಇತರರು ಉಪಸ್ಥಿತರಿದ್ದರು. 
ಆದರ್ಶ ಆಸ್ಪತ್ರೆಯ ಡಯಾಟೀಶನ್​ ಅನುಶ್ರೀ ಕಾರ್ಯಕ್ರಮ ನಿರ್ವಹಿಸಿದರು. 

ವಿವಿಧ ಪ್ರಾತ್ಯಕ್ಷಿಕೆ, ಉಚಿತ ತಪಾಸಣೆ

 ಬೆಳಗ್ಗೆ 9ರಿಂದ 4ರ ವರೆಗೆ ನಡೆದ ಡಯಾಬಿಟೀಸ್​ ಮೇಳದಲ್ಲಿ ಮಾದರಿ ಡಯಾಬಿಟೀಸ್​ ಪಥ್ಯಾಹಾರ ಪ್ರದರ್ಶನ, ವ್ಯಾಯಾಮ ಮತ್ತು ಯೋಗ ಪ್ರಾತ್ಯಕ್ಷಿಕೆ, ಆದರ್ಶ ದೇಹತೂಕ ಪ್ರಾತ್ಯಕ್ಷಿಕೆ, ಇನ್ಸುಲಿನ್​ ಉಪಯೋಗಿಸುವ ಮಾಹಿತಿ, ಡಯಾಬಿಟೀಸ್​ ಮತ್ತು ಹೃದ್ರೋಗ ಕಾಯಿಲೆ, ಡಯಾಬಿಟೀಸ್​ ಮತ್ತು ಕಿಡ್ನಿ ತೊಂದರೆ, ಗ್ಲುಕೋಮೀಟರ್​ ಉಪಯೋಗಿಸುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಅಲ್ಲದೆ, ಉಚಿತವಾಗಿ ರಕ್ತ ಪರೀಕ್ಷೆ, ಕಿಡ್ನಿ ಪರೀಕ್ಷೆ, ಇಸಿಜಿ, ಕಣ್ಣಿನ ತಪಾಸಣೆಯನ್ನೂ ನಡೆಸಲಾಯಿತು. ವಿವಿಧ ತಜ್ಞರು ಪಾಲ್ಗೊಂಡಿದ್ದರು.