ಉಡುಪಿ: ರಾಜ್ಯಾದ್ಯಂತ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ನೀಡಲು 8 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ. ಈ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ವರದಿ ಪಡೆಯಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳ ಸಮೀೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಆರ್. ಹೆಬ್ಬಾಳ್ಕರ್ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಆದರೆ ಬೆಳೆ ಹಾನಿ ಪ್ರಮಾಣ ಕೇವಲ 600 ಹೆಕ್ಟೇರ್ ಮಾತ್ರ ಇದೆ. ಕಳೆದ ಸಾಲಿನಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾಣಿಯಾಗಿತ್ತು. ಹೀಗಾಗಿ ಬೆಳೆಹಾನಿಯನ್ನು ಸರಿಯಾಗಿ ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಹೇಳಿದರು.
ಕಳೆದ ಸಭೆಯಲ್ಲಿ ಕಳಪೆ ಗುಣಮಟ್ಟದ ಭತ್ತದ ಬೀಜ ವಿತರಣೆಯಿಂದ ರೈತರಿಗೆ ನಷ್ಟ ಉಂಟಾಗಿದೆ. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲು ಹಾಗೂ ಪರಿಹಾರವನ್ನು ಒದಗಿಸಲು ಸೂಚಿಸಲಾಗಿತ್ತು. ಆದರೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದರೆ ಅಷ್ಟೇ ಸಾಲದು ಎಂದರು.
ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಸಣ್ಣ ಪ್ರಮಾಣದ ಚೆಕ್ ಡ್ಯಾಂಗಳನ್ನು ನಿಮಾರ್ಣ ಮಾಡಲು 6 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲದ ಸ್ಥಿತಿಯಿದೆ. ಈ ಚೆಕ್ ಡ್ಯಾಂಗಳ ನಿಮಾರ್ಣ ನಕ್ಷೆ ಅವೈಜ್ಞಾನಿಕವಾಗಿದ್ದು, ಅನುದಾನದ ಬಳಕೆಯೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಜಿಪಂ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯಡಿ 540.76 ಕೋಟಿ ರೂ. ಮೊತ್ತದಲ್ಲಿ 487 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 1.80 ಲಕ್ಷ ನಳ ಸಂಪರ್ಕ ಕಲ್ಪಿಸಬೇಕಾಗಿತ್ತು. ಆದರೆ 1.49 ಲಕ್ಷ ನಳ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಪ್ರತಿ ನಳದಲ್ಲಿಯೂ ಸಮರ್ಪಕವಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು ಎಂದರು.
ಜಂಟಿ ಸರ್ವೆ
ಜಿಲ್ಲೆಯಲ್ಲಿ ಕಂದಾಯ ಜಮೀನು ಹಾಗೂ ಅರಣ್ಯ ಜಮೀನು ಗುರುತಿಸಲು ಸರ್ವೇ ಕಾರ್ಯವನ್ನು ಜಂಟಿಯಾಗಿ ಕೈಗೊಳ್ಳಲಾಗುತ್ತಿದೆ. ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಸರ್ವೇ ಇಲಾಖೆಗಳು ಜವಾಬ್ದಾರಿಯಿಂದ ಸರ್ವೆ ಕೈಗೊಳ್ಳುವುದರೊಂದಿಗೆ ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.
ಪಟ್ಟಾ ಜಾಗದಲ್ಲಿ ಕಲ್ಲು ಗಣಿಗಾರಿಕೆಗೆ ಆಕ್ಷೇಪ
ಜಿಲ್ಲೆಯಲ್ಲಿ ಪಟ್ಟಾ ಜಾಗದಲ್ಲಿ ವಾಸದ ಮನೆ ಅಥವಾ ಕಟ್ಟಡ ಕಟ್ಟಲು ಬೇಡಿಕೆ ಇರುವ ಕೆಂಪು ಕಲ್ಲು ಗಣಿಗಾರಿಕೆಗೆ 3ಎನಲ್ಲಿ ಅನುಮತಿ ನೀಡಿದರೂ ಸಹ ಅರಣ್ಯ ಇಲಾಖೆ ಆಕ್ಷೇಪಣೆ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು, ಮೂರು ದಿನಗಳ ಒಳಗಾಗಿ ಕ್ರಮಕೈಗೊಳ್ಳಬೇಕು. ಜನಸಾಮಾನ್ಯರ ಮನೆ ನಿಮಾರ್ಣಕ್ಕೆ ಮರಳು ಹಾಗೂ ಕೆಂಪುಕಲ್ಲಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಜನ ಸಾಮಾನ್ಯರು ಮನೆ ನಿರ್ಮಿಸಲು ಲೇಔಟ್ ಅಪ್ರೋವ್ ಗಾಗಿ 9/11 ಗಾಗಿ ಅರ್ಜಿ ಸಲ್ಲಿಸಿದರೆ ಅವುಗಳ ವಿಲೇವಾರಿ ತಡ ಆಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಅರ್ಜಿಗಳನ್ನು ಆಧ್ಯತೆಗಳ ಮೇಲೆ ವಿಲೇವಾರಿ ಮಾಡಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಸಭೆ ಕರೆದು ತ್ವರಿತವಾಗಿ ವಿಲೇವಾರಿ ಮಾಡಲು ಕಾರ್ಯಪ್ರವೃತ್ತರಾಗಬೇಕೆಂದರು.
ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಜಲ್ಜೀವನ್ ಮಿಷನ್ ಯೋಜನೆಯಡಿ ಉಡುಪಿ ವಿಧಾನಸಭಾ ಕ್ಷೇತ್ರದ 13 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ನೀರಿನ ಸರಬರಾಜುಗಳು ಸರಿಯಾಗಿ ಆಗುತ್ತಿಲ್ಲ ಎಂದು ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಅತಿವೃಷ್ಟಿಯಿಂದಾಗಿ ಕಡಲಕೊರೆತ ಉಂಟಾಗುತ್ತಿದೆ. ಕಟಪಾಡಿಯ ಮಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕೊಚ್ಚಿ ಹೋಗುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವರಾಹಿ ನೀರಾವರಿ ಯೋಜನೆಗೆ ಹೆಗ್ಗುಂಜೆ ಗ್ರಾಮದಲ್ಲಿ ರೈತರ ಜಮೀನನ್ನು ಸ್ವಾಧಿನಪಡಿಸಿಕೊಂಡಿದ್ದು, ಈವರೆಗೂ ಅಲ್ಲಿನ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಿರುವುದಿಲ್ಲ. ಬಾಕಿ ಉಳಿದಿರುವ ಪರಿಹಾರದ ಹಣವನ್ನು ರೈತರಿಗೆ ನೀಡಲು ಕ್ರಮವಹಿಸಬೇಕು ಎಂದರು.
ವಿಧಾನಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಮಾತನಾಡಿ, ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆಗಳಿಂದ, ಉತ್ತರ ಕರ್ನಾಟಕದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಶಾಲಾ ದಾಖಲಾತಿಯಾಗಿ ಒಂದು ತಿಂಗಳಾದರೂ ಹಾಸ್ಟೆಲ್ ಸೌಲಭ್ಯ ಸಿಗದೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದರು.
ಶಾಸಕರಾದ ವಿ. ಸುನಿಲ್ ಕುಮಾರ್ , ಗುರುರಾಜ್ ಶೆಟ್ಟಿ ಗಂಟಿಹೊಳೆ, ವಿಪ ಸದಸ್ಯ ಡಾ. ಧನಂಜಯ ಸರ್ಜಿ ಹಾಗೂ ಮಂಜುನಾಥ್ ಭಂಡಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಸಾಂಕೇತಿಕವಾಗಿ ಶಾಲಾ ಪೂರ್ವ ಶಿಕ್ಷಣ ಕಿಟ್ ಮತ್ತು ಟಿ.ವಿ.ಗಳನ್ನು ವಿತರಿಸಲಾಯಿತು. ಸಂಜೀವಿನಿ ಮಹಿಳಾ ಗುತ್ತಿಗೆದಾರರಿಗೆ ಒಡಂಬಡಿಕೆ ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಕೆ.ಡಿ.ಪಿ ಸಭೆಯ ಸದಸ್ಯರಾದ ಪ್ರಸನ್ನ ಕುಮಾರ್, ವೀಣಾ ಶೆಟ್ಟಿ, ಐಡಾ ಗಿಬ್ಬ ಡಿ ಸೋಜಾ ಮತ್ತಿತರರು ಉಪಸ್ಥಿತರಿದ್ದರು.