ಜಿಲ್ಲೆ

ಆಮಿಷಗಳಿಗೆ ಮತ ಮಾರಿಕೊಳ್ಳುವುದು ಸಲ್ಲದು: ನ್ಯಾ.ಶಾಂತವೀರ ಶಿವಪ್ಪ

ಉಡುಪಿ: ವಿಧಾನಸಭಾ ಸಾರ್ವತ್ರಿಕಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳಬಾರದು. ಉತ್ತಮ ಅಭ್ಯರ್ಥಿಗೆ ಮತಚಲಾಯಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಗುರುವಾರ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನಕೇಂದ್ರದಲ್ಲಿ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಮತದಾನ ಜಾಗೃತಿ ಸಾರುವ ಟ್ಯಾಬ್ಲೋ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಚುನಾವಣೆಯಲ್ಲಿ ಬಹುತೇಕಯುವಜನತೆ ಮೊದಲ ಬಾರಿಗೆ ಮತ ಚಲಾಯಿಸುವ ಸಂಭ್ರಮದಲ್ಲಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ತಮ್ಮ ಮುಂದಿನ ಭವಿಷ್ಯಕ್ಕೆಉತ್ತಮ ಯೋಜನೆ ರೂಪಿಸುವ, ಉದ್ಯೋಗ ಸೃಷ್ಠಿಸುವ, ಪ್ರಾಮಾಣಿಕ ಮತ್ತು ನೈತಿಕತೆಯಿರುವ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ತಮ್ಮ ಹಕ್ಕು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ವಿದ್ಯಾರ್ಥಿನಿಯರಿಗೆ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಮತದಾರರ ಪಟ್ಟಿಗೆ ಹೆಸರು ನೊಂದಣಿ ಮಾಡಿದ್ದು, ಇದರಿಂದ ಜಿಲ್ಲೆಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಸಹ ಬಂದಿದೆ. ಮತದಾನ ದಿನದಂದು ಜಿಲ್ಲೆಯ ಎಲ್ಲಾ ಯುವಜನತೆ ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಉಡುಪಿ ನಗರಸಭೆಯ ಪೌರಾಯುಕ್ತ ರಮೇಶ್ ನಾಯಕ್ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಕಾಲೇಜಿನ 2000 ಕ್ಕೂ ಅಧಿಕ ವಿದ್ಯಾರ್ಥಿನಿಯರು ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.