ಜಿಲ್ಲೆ

ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ: ಸಚಿವ ಅಂಗಾರ

ಉಡುಪಿ: ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಶಿಕ್ಷಕರು ಆದರ್ಶ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಭೋದಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳಿಸಬೇಕು. ಸ್ವತಃ ಉತ್ತಮ ಕಾರ್ಯ ಸಾಧನೆಗಳನ್ನು ಮಾಡಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಭಾನುವಾರ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಸ್.ರಾಧಾಕೃಷ್ಣನ್ , ತಾಂತ್ರಿಕ ಕ್ಷೇತ್ರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಮಹಾನ್ ವ್ಯಕ್ತಿಗಳು ಅಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಗಳಿದ್ದರೂ ಸಹ ತಾಳ್ಮೆಯಿಂದ ಗೆದ್ದು ಯಶಸ್ಸನ್ನು ಸಾದಿಸಿದ್ದಾರೆ. ಪ್ರಶಸ್ತಿ ವ್ಯಕ್ತಿಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದಕ್ಕೆ ಪೂರಕವಾಗಿ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಸಮಾಜದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಬೇಕು ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಿದಾಗ ಮಾತ್ರ ಅವರು ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ನಾಗರಿಕನಾಗಲು ಸಾಧ್ಯ ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯದಲ್ಲಿಯೇ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಿದೆ. ಶಿಕ್ಷಕರು ಕಲಿಕಾ ವಿಧಾನದಲ್ಲಿ ಹೊಸತನದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಡಿಡಿಪಿಐ ಶಿವರಾಜ್, ಡಯಟ್ ಉಪ ನಿರ್ದೇಶಕ ಗೋವಿಂದ ಮಡಿವಾಳ, ಬಿಇಓ ಡಾ.ಅಶೋಕ್ ಕಾಮತ್, ಬಿ.ಟಿ.ನಾಯಕ್, ಚಂದ್ರಾನಾಯ್ಕಾ ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ 17 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನೂ ಗೌರವಿಸಲಾಯಿತು. ಅಮೃತ ಭಾರತಿಗೆ ಕನ್ನಡದಾರತಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.