ಜಿಲ್ಲೆ

ಜಿಲ್ಲಾ ಆಸ್ಪತ್ರೆ ಡಯಾಲಿಸಿಸ್​ ಘಟಕ ಸಮರ್ಪಕ ನಿರ್ವಹಣೆಗೆ ಸೂಚನೆ

ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್​ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಡೆಂಘೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಡೆಂಘೆ ಚಿಕಿತ್ಸೆಗೆ ಅಗತ್ಯ ಔಷಧಗಳ ದಾಸ್ತಾನು ಇರಿಸಿಕೊಳ್ಳಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಸೂಚಿಸಿದರು.

ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಡುಪಿ ತಾಲೂಕು ಮಟ್ಟದ ತೆಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಗಸ್ಟ್​ ತಿಂಗಳಿನಲ್ಲಿ ನೂರಕ್ಕೂ ಅಧಿಕ ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲು ನಗರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತ್ಯಾಜ್ಯ ವಿಲೇವಾರಿ ಅತೀ ಮುಖ್ಯವಾಗಿದ್ದು, ಈ ಬಗ್ಗೆ ಗ್ರಾ.ಪಂ. ಮಟ್ಟದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು. ಕೇಂದ್ರ ಸರ್ಕಾರದ ಅಯುಷ್ಮಾನ್​ ಭವ ಅಭಿಯಾನ ಆರಂಭಿಸಿದ್ದು, ಜಿಲ್ಲೆಯಲ್ಲಿ ಶೇ.40ರಷ್ಟು ಮಂದಿ ಆಯುಷ್ಮಾನ್​ ಕಾರ್ಡ್​ ಹೊಂದಿದ್ದು, ಮುಂದಿನ ದಿನಗಳಲ್ಲಿ ಮನೆ ಮನೆಗೆ ಕಾರ್ಡ್​ಗಳನ್ನು ತಲುಪಿಸಲಾಗುವುದು. ಗ್ರಾಮ ಒನ್​ ಸೆಂಟರ್​ ಮತ್ತು ಡಿಜಿಟಲ್​ ಸೇವಾ ಕೇಂದ್ರದಲ್ಲಿ ರೇಷನ್​ ಕಾರ್ಡ್​, ಆಧಾರ್​ ಕಾರ್ಡ್​ ಹಾಗೂ ಮೊಬೈಲ್​ ಸಂಖ್ಯೆ ನೀಡಿ ಕಾರ್ಡ್​ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಕನ್ನಡ ಶಾಲೆಗೆ ಶಿಕ್ಷಕರ ಕೊರತೆ
ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿ, ಕಳೆದ 21 ವರ್ಷಗಳಿಂದ ಕನ್ನಡ ಶಾಲೆಗೆ ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲೂ ಧ್ವನಿ ಎತ್ತಲಾಗಿದೆ. ಶಿಕ್ಷಕರ ಕೊರತೆಯಿಂದ ಶಾಲೆಗಳು ಮುಚ್ಚುವಂತಾಗಬಾರದು. ಖಾಸಗಿ ಸಹಭಾಗಿತ್ವದಲ್ಲಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಿಬ್ಬಂದಿ ಕೊರತೆಯಿದ್ದರೆ ತಿಳಿಸಿ
ಅಭಿವೃದ್ಧಿ ಚಟುವಟಿಕೆಗಳಿಗೆ ಸಿಬಂದಿ ಕೊರತೆಯ ಕಾರಣ ನೀಡುವ ಬದಲು ಯಾವ ಇಲಾಖೆಯಲ್ಲಿ ಎಷ್ಟು ಸಿಬಂದಿ ಕೊರತೆ ಇದೆ ಎಂಬ ಬಗ್ಗೆ ವಿವರ ನೀಡಿದರೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕರು ತಿಳಿಸಿದರು.

ಗೈರಾದ ಅಧಿಕಾರಿಗಳಿಗೆ ನೋಟೀಸ್​
ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಗೆ ಗೈರಾಗುವ ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್​ ನೀಡುವಂತೆ ತಾಪಂ ಇಒ ಅವರಿಗೆ ಶಾಸಕರು ಸೂಚಿಸಿದರು.

ತಾ.ಪಂ. ಆಡಳಿತಾಧಿಕಾರಿ ರವೀಂದ್ರ, ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್​ ಥೋಮಸ್​ ಉಪಸ್ಥಿತರಿದ್ದರು.