ವಿಜಯವಾಣಿ ಸುದ್ದಿಜಾಲ ಉಡುಪಿ
ವಿವಿಧ ವಿಚಾರ ಗೋಷ್ಠಿಗಳು, ಚಿಂತನ -ಮಂಥನ, ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದವರಿಗೆ ಗೌರವ, ಪುಸ್ತಕ ಬಿಡುಗಡೆ ಮುಂತಾದ ವಿವಿಧತೆ ಹೊಂದಿರುವ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಾಂಗವಾಗಿ ನೆರವೇರಲಿ. ತಾಯಿ ಭಾಷೆಯ ಮನಸುಗಳೆಲ್ಲ ಒಂದಾಗಲಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಶುಭಹಾರೈಸಿದರು.
ಕೊಡವೂರು ಶಂಕರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಮೇ 17ರಂದು ಪ್ರೊ. ಎಂ.ಎಲ್. ಸಾಮಗ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಕನ್ನಡದ ಹಬ್ಬ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ವಿದ್ಯಾಕುಮಾರಿ ಆಶಿಸಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕನ್ನಡದ ಕಾರ್ಯಕ್ರಮ ಚೆನ್ನಾಗಿ ನಡೆಯಲಿ ಎಂದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜನಿ ವಸಂತ್, ಕೋಶಾಧಿಕಾರಿ ರಾಜೇಶ ಪಣಿಯಾಡಿ, ಉಡುಪಿ ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ, ಸಾಂಸತಿಕ ಕಾರ್ಯದರ್ಶಿ ಆರ್.ವಸಂತ, ಸಾಮಾಜಿಕ ಜಾಲತಾಣ ನಿರ್ವಹಣೆಯ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.