ಜಿಲ್ಲೆ

ಉಡುಪಿ ಜಿಲ್ಲೆ ರಾಜ್ಯದ ಹೆಗ್ಗುರುತು: ರಾಜ್ಯಪಾಲ ಗೆಹಲೋತ್ ಶ್ಲಾಘನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಉಡುಪಿ ರಾಜ್ಯದ ಹೆಗ್ಗುರುತಾಗಿದ್ದು, ದೇವ-ದೇವತೆಯರು ನೆಲೆಸಿರುವ ಪುಣ್ಯಭೂಮಿ ಎಂದು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿದೆ. 25 ವರ್ಷದಲ್ಲಿ ಜಿಲ್ಲೆ ವೇಗಗತಿಯಲ್ಲಿ ಅಭಿವೃದ್ಧಿ ಹೊಂದಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದ್ದಾರೆ.


ಗುರುವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ರಚನೆಯಾದರೆ ಸರ್ಕಾರದ ಎಲ್ಲ ಪ್ರಮುಖ ಇಲಾಖೆಗಳ ಕಚೇರಿಗಳು ಪ್ರಾರಂಭವಾಗುವುದರಿಂದ ಇಲಾಖೆ ವರಿಷ್ಠಾಧಿಕಾರಿಗಳು ಅಭಿವೃದ್ಧಿಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ಜನರ ಸಹಭಾಗಿತ್ವದೊಂದಿಗೆ ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ ಎಂಬಂತೆ ಸರ್ವರ ಏಳಿಗೆಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿಬದ್ಧವಾಗಿವೆ ಎಂದು ಹೇಳಿದರು.

ನಾಯಕತ್ವ ಗುಣ: ಜಿಲ್ಲೆಯ ಜನರು ತಮ್ಮ ಧರ್ಮ, ಸಂಸ್ಕೃತಿಯನ್ನು ಜೀವಂತವಿರಿಸುವಲ್ಲಿ ಶ್ರಮ ವಹಿಸಿದ್ದಾರೆ. ಇಲ್ಲಿನ ಜನರ ನಾಯಕತ್ವ ಗುಣ ಶ್ಲಾಘನೀಯ. 13ನೇ ಶತಮಾನದಲ್ಲಿ ಮಧ್ವಾಚಾರ್ಯರು, ಕೃಷ್ಣ ಮಠ, ಅಷ್ಟಮಠಗಳನ್ನು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರಿಂದ ಪ್ರತಿಷ್ಠಿತ ಕೊಲ್ಲೂರು ದೇವಸ್ಥಾನ ಪ್ರಮುಖ ಆಧ್ಯಾತ್ಮಿಕ ತಾಣವಾಗಿದೆ. ಕಾರ್ಕಳ ಶಿಲಾ ಕೆತ್ತನೆಗೆ ಹೆಸರುವಾಸಿಯಾಗಿದ್ದು, ನಾಗಾರಾಧನೆ, ಯಕ್ಷಗಾನ, ಭೂತಕೋಲ ಮುಂತಾದ ಜಾನಪದ ಪ್ರಕಾರಗಳಿಂದ ತುಳುನಾಡಿನ ಕಲೆ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆ ಎಂದರು.

ಜನಜಾಗೃತಿ ಅಭಿನಂದನೀಯ: ದೇಶದಲ್ಲೇ ಪುರುಷರಿಗಿಂತ ಮಹಿಳೆಯರು ಅಧಿಕವಾಗಿರುವ ಜಿಲ್ಲೆ ಉಡುಪಿ. 1000 ಸಾವಿರ ಪುರುಷರ ತುಲನೆಯಲ್ಲಿ 1030 ಮಹಿಳೆಯರಿದ್ದಾರೆ. ಇಲ್ಲಿನ ಜನರ ಸಾಮಾಜಿಕ ಜಾಗೃತಿ ಅಭಿನಂದನೀಯ ಎಂದು ಹೇಳಿದರು.


ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ ಸಿಇಒ ಪ್ರಸನ್ನ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ ಡಾ. ಕಲ್ಪನಾ ಗೋಪಾಲನ್ ಉಪಸ್ಥಿತರಿದ್ದರು. ದೂರದರ್ಶನ ವಾರ್ತಾವಾಚಕ ಶಂಕರ್ ಪ್ರಸಾದ್ ನಿರೂಪಿಸಿದರು.